Friday, September 30, 2016

ಗುಳೆ


ಬಂದಿಲ್ಲ ಮಳೆ
ಬಿತ್ತಿಲ್ಲ ಬೆಳೆ
ಬತ್ತಿಹುದು ತೊರೆ
ಹಿಂಗಿಹುದು ಕೆರೆ

ಬಂದಿಹುದು ಬರಗಾಲ
ತಂದಿಹುದು ಹಾಹಾಕಾರ
ಕುಡಿಯಲು ನೀರಿಲ್ಲ
ದನಕರುಗೆ ಮೇವಿಲ್ಲ

ಸರ್ಕಾರದವರು ಬಂದು
ಬರಪರಿಹಾರ ಘೋಷಿಸಿದರು
ಲಕ್ಷ ಲಕ್ಷ ನಿಧಿಯ
ಕಡತದಲ್ಲಿ ತೋರಿಸಿದರು

ಕಾಲುವೆಯ ದಾಹದಂತೆ
ಅಧಿಕಾರಿಗಳ ಧನದಾಹದಿ
ಹೆಸರಿಗೆ ಬಂದದ್ದು
ಕೈಗೆ ಬಾರದಾಗಿ
 
ಗಂಜಿಗಾಗಿ ಪರದಾಡಿ
ದನಕರುಗಳ ಮಾರಿ
ಹೊಲಮನೆಯ ಅಡವಿಟ್ಟು
ಸಾಲಗಾರನಾಗಿ

ಕಣ್ಣು ಬಾಯಿಬಿಟ್ಟು
ಪರಿಹಾರಕಾದು ಬೇಸರಿಸಿ
ವಿಧಿಯಿಲ್ಲದೆ ಹೊರಟಿಹನು
ನಮ್ಮ ರೈತ ಗುಳೆ

                                       --ಕವಿತಾ ಗೋಪಿಕುಂಟೆ 

Monday, September 26, 2016

ಕೊಂಡ


ಸೀತೆ ರಾಮನವಳೆಂದು
ನಿರೂಪಿಸಲು
ಅಗ್ನಿಗಾರಿದಹಾಗೆ
ಕಾವೇರಿ ನಮ್ಮವಳೆಂದು
ತೋರಿಸಲು
ಕಿಚ್ಚಿನ ಕೆಂಡ ಹಾಸಿ
ಕೊಂಡ ಹಾಯಬೇಕೆ .?

--ಕವಿತಾ ಗೋಪಿಕುಂಟೆ 

27/1/2015 ರ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ನನ್ನಕವನ "ಆತ್ಮದ ಸೆಳೆತ"


Friday, September 23, 2016

ಕಣ್ಣೀರಧಾರೆ



ಈ ಸೃಷ್ಟಿಯೇ ಕಣ್ಣು
ಕಣ್ಣಗುಡ್ಡೆಯೇ ನೆಲ
ರಸಧಾತುವೇ ಜಲ
ನರನಾಡಿಗಳೇ ಮರಗಿಡ
ರೆಪ್ಪೆಗಳೇ ಓಜೋನ್ 

ಸೃಷ್ಟಿ ಸಲಹಲೆಂದೇ
ಹಣೆಯ ಮೇಲಿರಿಸಿಕೊಂಡಿಹನು
ಮುಕ್ಕಣ್ಣನು ಮೂರನೇ ಕಣ್ಣನು
ಸೃಷ್ಟಿ ಶಾಂತಿಯಿಂದಿರಲು
ಅವ ಶಾಂತಿಯಿಂದಿರುವನು 

ಉಪಟಳವು ಅತಿಯಾಗಿ
ಬಿಸಿಯೇರಿ ಹೊಗೆಯಾಡಿ
ಮಲಿನ ಆವರಿಸಿ
ಧೂಳು ಬಡಿದಾಗ
ತೆರೆವನು ಮುಕ್ಕಣ್ಣನು
ಮೂರನೆಯ ಕಣ್ಣನು 

ತರುವನು ವಿಕಿರಣವನು  
ಅಳಿವಿನಂಚಿನ ಸುಳಿವನು
ಸುನಾಮಿಯಂತ ಕಣ್ಣೀರರಿಸಿ
ನರನಾಡಿಗಳ ನರಳಾಡಿಸಿ
ತಂದೊಡ್ಡುವನು ವಿನಾಶವನು 


                                     
 --ಕವಿತಾ ಗೋಪಿಕುಂಟೆ 

Saturday, September 17, 2016

ಮಣ್ಣಿನ ಸೆಳೆತ

ಏನೇನೋ ಓದಿ ಎಷ್ಟೆಲ್ಲಾ ಡಿಗ್ರಿ ತಗೊಂಡು ವಿಶ್ವ ಸುತ್ತಿ ಬಂದ್ರು ಒಂದು ನೆಲೆ ಅಂತ ತೋರಿಸೋದು ನಮ್ಮ ತವರು ನೆಲ. ಆ ತವರು ನೆಲದ ಸೆಳೆತಕ್ಕೆ ಸಿಕ್ಕಿ ಕಂಪ್ಯೂಟರ್ ಬಿಟ್ಟು ಮೇಟಿ ಹಿಡಿದ ಮಂಡ್ಯದ ಮಧುಚಂದನ್ ಸರ್ ಅವರ ಯಶೋಗಾಥೆ ನಮ್ಮಂತ ಸಾವಿರಾರು ಮಂದಿಗೆ ಸ್ಪೂರ್ತಿ ಸೆಲೆ. ಮಧುಚಂದನ್ ಸರ್ ರವರನ್ನ ಮಣ್ಣು ಸೆಳೆದ ರೀತಿ , ಅವತ್ತಿನ ಅವರ ಆಲೋಚನೆ ಮತ್ತು ಅವರ  ಶ್ರಮವನ್ನ ಊಹಿಸಿಕೊಂಡು  ಕವಿತೆಯೊಂದನ್ನ  ಬರೆದಿದ್ದೇನೆ. ದಯವಿಟ್ಟು ಓದಿ ಪ್ರತಿಕ್ರಯಿಸಿ  


ಮೂಗಿಗೆ ಮಳೆಯಲಿ ಮಿಂದೆದ್ದ
ಮಣ್ಣವಾಸನೆಯ  ಸೆಳೆತ
ಹದವಾದ ಮನಸಿಗೆ
ತವರ ಮಣ್ಣಿನ ಸೆಳೆತ

ಸೆಳೆತ ಹೆಚ್ಚಾಗಿ
ಮೆದುಳೆಲ್ಲಾ ಮಣ್ಣಾಗಿ
ಎರೆಹುಳಗಳ ಸಲಹೆ
ರಭಸ ತೀವ್ರವಾಗಿ

ಆಲೋಚನೆಗಳೆಲ್ಲ ಕಳಿತು
ಕಣಕಣದಲ್ಲೂ ಕುಳಿತು
ರಸವಾಗಿ ಹೊರಹೊಮ್ಮಿ
ತಂದಿರುವುದೊಳ್ಳೆ ಫಸಲು

                                 --ಕವಿತಾ ಗೋಪಿಕುಂಟೆ  

Thursday, September 15, 2016

ಕರುನಾಡ ಕಾವೇರಿ

ಭೂತಾಯಿ ಹಡೆದವ್ವ
ನಮ್ಮೆಲ್ಲರ ಜನ್ಮದಾತೆ
ಕಾವೇರಿ ನೀ ನಮ್ಮವ್ವ
ಕರುನಾಡ ಸಲಹುವಾಕೆ
ಭೂತಾಯಿ ದೇವಕಿ
ನೀನಮ್ಮ ಯಶೋದೆ
ಇಲ್ಲಿ ಹುಟ್ಟಿ ಅಲ್ಲಿ ಹರಿದು
ಕಡಲಸೇರುವೆಯೇಕೆ
ನೀನಲ್ಲಿ ಹರಿವಾಗ
ನಮಗಿಲ್ಲಿ ಪರದಾಟ
ನಿನಗಾಗಿ ಹೋರಾಟ
ನಿನಗಾಗಿ ಚೀರಾಟ
ಹೆಣಗಳ ಎಳೆದಾಟ
ರಾಜಕೀಯ ದಾಳದಾಟ
ಸಕ್ಕರೆ ಚೆಲ್ಲುವ ನಾಡಲ್ಲಿ
ಚೆಲ್ಲಾಡಿದೆ ಮಡುಗಟ್ಟಿದ ರಕ್ತ
ಕಸ್ತೂರಿ ಕಂಪಿಲ್ಲ
ಹೊಗೆಯೇ ತುಂಬಿದೆಯಲ್ಲ
ಬಾ ತಾಯೇ ಕಾವೇರಿ
ನೀ ಬೇಗ ಬಾ
ಇಲ್ಲೇ ಹುಟ್ಟಿ ಇಲ್ಲೇ ಹರಿದು
ಕಡಲ ನೀಸೇರು ಬಾ
ಕರುನಾಡ ಕಂದನ
ಸಲಹು ಬಾ
ಸಲಹಿ ವಿಜಯಪತಾಕೆ
ಹಾರಿಸು ಬಾ
ಎಲ್ಲೆಡೆಯು ಶಾಂತಿ
ನೆಮ್ಮದಿಯ ಪಸರಿಸು ಬಾ

                                    --ಕವಿತಾ ಗೋಪಿಕುಂಟೆ 

ಭಾವಬಂಧ

ಅವನಾತ್ಮ ಅವಳಲ್ಲಿ
ಅವಳಾತ್ಮ ಅವನಲ್ಲಿ
ಬದುಕೇ ಅವರಲ್ಲಿ
ಅವರೇ ಬದುಕಲ್ಲಿ
ಬದುಕಲು
ಬೆಸೆದಿಹನು ಬಂಧ
ಆ ಭಗವಂತ

ಅಲ್ಲೊಂದು ಇಲ್ಲೊಂದು
ಭವಬಂಧನಗಳ
ಬಿಸಿಬುಗ್ಗೆ ಏಳಿಸಿ
ಪರೀಕ್ಷಿಸುವನು
ಬೆಸೆದ ಬಂಧ
ಘನಗೊಳಿಸುವನು
ಭಾವಬಂಧ
ಆ ಭಗವಂತ

                    --ಕವಿತಾ ಗೇೂಪಿಕುಂಟೆ