Tuesday, August 25, 2015

ಮೂಗುತಿ

ಮೂಗುತಿಯಿಲ್ಲದ ಹೆಂಡತಿ
ಕಿರೀಟವಿಲ್ಲದ ದೇವತೆ
ಮೀಸೆಯಿಲ್ಲದ ಗಂಡ
ಗೋಪುರವಿಲ್ಲದ ಗುಡಿ

ನನ್ನಾತ್ಮದ ಹುಳು

ಭುವಿಯಿಂದ ಹುಳು
ಹೊರಬರುವಂತೆ
ನನ್ನಾತ್ಮದ ಕಾವ್ಯ
ಹೊರಬರುವುದು

ಒಮ್ಮೊಮ್ಮೆ ತೆವಳಿ
ಮತ್ತೊಮ್ಮೆ ಪುಟಿದು
ಕೆಲವೊಮ್ಮೆ ಹಾರಿ
ಹೊರಬರುವುದು

ಹೊರಬರುವರೆಗೂ ನನ್ನ
ತಲೆ ಕೊರೆವುದು

                                          ಇಂತಿ,
                                          ಕವಿತಾ ಗೋಪಿಕುಂಟೆ 

Wednesday, August 19, 2015

ಮ್ಯಾನೇಜರ್

ಆಫೀಸ್ ನಲ್ಲಿ  ಮ್ಯಾನೇಜರ್
ಮುಂದೆ ಕೂತ್ಕೊಳೋದು,
ದನದ ಕೊಟ್ಟಿಗೆಯಲ್ಲಿ
ಕೂತ್ಕೊಳೋದು
ಎರೆಡು ಒಂದೇ
ಯಾವ ಕಡೆ ಕೊಸರುದ್ರು
ಒದಿಯೋದೇ,
ಏನು ಮಾಡುದ್ರು
ಗುಮ್ಮೊದೇ

                                   ಇಂತಿ,
                                   ಕವಿತಾ ಗೋಪಿಕುಂಟೆ

Tuesday, August 18, 2015

ಜ್ಞಾನವಿಲ್ಲದ ಮನ

ಜ್ಞಾನದ ಸ್ನಾನವಿಲ್ಲದ ಮನಸಿಟ್ಟು
ನೂರುಬಾರಿ ಜಳಕ ಮಾಡಿ
ಸುಗಂಧದ್ರವ್ಯಗಳ ಲೇಪಿಸಿದರೇನು
ಮನದ ದುರ್ಗಂಧ ಹೋದೀತೇ

ಚಾಡಿ ಹೇಳುವ ನಾಲಿಗೆಗೆ
ಉಪ್ಪಾಕಿ ತಿಕ್ಕಿದರೇನು
ಅದರ ಚಟವ ಬಿಟ್ಟೀತೇ

ಕೆಸರಲಾಡಿದ ಎಮ್ಮೆಗೆ
ಮೈತೊಳೆದರೆ ಸಾಕು
ದುರ್ಗಂಧ ಹೋಗುವುದು
ಹಲ್ಲು ತಿಕ್ಕದಿದ್ದರೂ ಬಾಯಿ
ವಾಸನೆಬಾರದು

ಛೀ ಛೀ ಎಮ್ಮೆಗಿಂತ ಕೇಡು
ದುರುಳರ ಬಾಳು

                                           ಇಂತಿ,
                                           ಕವಿತಾ ಗೋಪಿಕುಂಟೆ

Monday, August 17, 2015

ಪ್ರತಿಭೆ

ಕೆಸರಲ್ಲೆ ಹುಟ್ಟುವುದು ಕಮಲ
ಬಡತನದಲ್ಲೇ ಹುಟ್ಟುವುದು ಪ್ರತಿಭೆ
ಕಮಲಕ್ಕೆ ಕೆಸರಿನ ವಾಸನೆ ಇಲ್ಲ
ಪ್ರತಿಭೆಗೂ ಬಡತನದ ಹಂಗಿಲ್ಲ
ಕಮಲವ ದೇವರಿಗರ್ಪಿಸುವಾಗ
ಪ್ರತಿಭೆಗೂ  ಮನ್ನಣೆ ಬೇಕಲ್ಲವೇ

                                                 ಇಂತಿ,
                                                 ಕವಿತಾ ಗೋಪಿಕುಂಟೆ

Thursday, August 13, 2015

ಆಯ್ಕೆ


ಹುಟ್ಟುವ ಆಯ್ಕೆ ನನಗಿರಲಿಲ್ಲ
ಸಾಯುವ ಆಯ್ಕೆ ಇದ್ದರೂ
ಸಾಯುವ ಮನಸಿಲ್ಲ
ಆಡಿ ಬೆಳೆವಾಗ ಕೊಡಲಿಲ್ಲ
ಆಯ್ಕೆಗೆ ನೀ ಅವಕಾಶ
ಎಲ್ಲಿ ಹೋದರೂ ನಿನ್ನದೇ
ಅಭಿಪ್ರಾಯ ನಿನ್ನದೇ ಆಯ್ಕೆ
ಬದುಕೆಂಬ ಮೂರುಮಾರಿನ
ಮೈಲಿಗಲ್ಲಲ್ಲಿ ಸವೆಸಿರುವೆ ಒಂದರ್ದವ
ಇನ್ನಾದರೂ ಬಿಡು ನನ್ನ
ಉಳಿದ ಪಥ ನಾ ನಡೆಯುವೆ
ನನ್ನಿಷ್ಟದ ಬದುಕ ನಾ ಬದುಕುವೆ
ನಡೆವ ಬರದಲ್ಲಿ ನಾ
ಬೀಳ್ವೆನೆಂಬ ಭಯ ಬೇಡ
ನನಗೂ ಇರಲಿ
ಏಳು ಬೀಳಿನ ಸವಿಗವನ
ಕೊನೆವರೆಗೂ ಇರಲಿ
ನಿನ್ನ ಆಶಿರ್ವಚನ

                                                      ಇಂತಿ,
                                                      ಕವಿತಾ  ಗೋಪಿಕುಂಟೆ