Tuesday, May 26, 2015

ಬಾಯಿಸಿಹಿ

ಕಳಿತ ಹಣ್ಣು ಮರದಲ್ಲಿ ಇರೋದು
ಬಹುರಾಷ್ಟ್ರೀಯ ಕಂಪನಿಯಲ್ಲಿ
ಕೆಲಸ ಮಾಡುತ್ತಾ ಇರೋದು
ಎರೆಡೂ ಒಂದೇ

ಕೆಳಗೆ ಯಾವಾಗ ಬೀಳ್ತಿನಿ
ಅಂತ ಹಣ್ಣಿಗೆ ಗೊತ್ತಿರಲ್ಲ
ಕಂಪನಿ ಯಾವಾಗ ತೆಗೆದು ಹಾಕುತ್ತೆ ಅಂತ
ಅಲ್ಲಿ ಕೆಲಸ ಮಾಡೋರಿಗೆ ಗೊತ್ತಿರಲ್ಲ

ಆದರೆ
ಹಣ್ಣು ಬಿದ್ದಾಗ, ಕೆಲಸ ಹೋದಾಗ
ಸಿಹಿಯಾಗೋದು ಮಾತ್ರ
ಬೇರೆಯವರ ಬಾಯಿ

                                                              ಇಂತಿ,
                                                              ಕವಿತಾ ಗೋಪಿಕುಂಟೆ

Thursday, May 21, 2015

ಮತ್ತೆ ಮತ್ತೆ ಒಲವುಆ ಮೋಡಕೂ ರವಿಕಂಡು ಒಲವಾಗಿ
ಪ್ರೀತಿ ತುಸು ಹೆಚ್ಚಾಗಿ ಕಾರ್ಮೋಡವಾಗಿದೆ
ಇನಿಯನ ನೋಡುವ ಪುಳಕದಿ
ತಂಗಾಳಿ ಸೋಕಿ ಮನ ಹಗುರಾಗಿದೆ
ನಿಂತಲ್ಲಿ ನಿಲ್ಲದೆ ಕುಂತಲ್ಲಿ ಕೂರದೆ
ಅಲ್ಲೊಮ್ಮೆ ಇಲ್ಲೊಮ್ಮೆ ಹಾರಾಡಿದೆ
ಇನಿಯ ಕಂಡಾಕ್ಷಣ ಮೈ ರಂಗು
ಹೊನ್ನಾಗಿ ಸಂಭ್ರಮಿಸುತಿದೆ
ಸಂಭ್ರಮವ ಕಂಡು ಇಳೆಯಿಂದ
ನವಿಲು ನೃತ್ಯಗೈದು ತನ್ನ
ಕಾಲ್ಗೆಜ್ಜೆ ನಾದದಿ ಶುಭಾಷಯ ಕೋರಿದೆ
ರವಿಯು ಪ್ರೀತಿ ತಿರಸ್ಕರಿಸಿ ಕಾಣದಾದಾಗ
ಚಡಪಡಿಸಿ ಹುಸಿಕೋಪವ ಗುಡುಗು
ಮಿಂಚಾಗಿ ತೋರ್ಪಡಿಸಿ
ದುಃಖ ತಾಳಲಾರದೆ ಚಟಪಟ ಮಳೆಯಾಗಿ
ಬಿಕ್ಕಿ ಬಿಕ್ಕಿ ಅಳುತ್ತಾ ಇಳೆಗೆ ತಂಪೆರೆದಿದೆ
ಆದರೆ
ಈ ಕಣ್ಣೀರು ನಲ್ಲೆಯ ಒಲವ ಕರಗಿಸಿದೆ
ಇದ ಕಂಡ ಮಳೆಬಿಲ್ಲು ಸಪ್ತ ವರ್ಣಗಳರಡಿ
ಸಾಂತ್ವನ ಹೇಳಿ ಹೊಸಹುರುಪ ತಂದಿದೆ
ಹೊಸ ಹುರುಪಲಿ ಹೊಸ ಹರುಷದಿ
ಆ ಮೋಡಕೆ ಮತ್ತೆ ಮತ್ತೆ ಒಲವಾಗಿದೆ

                                                       ಇಂತಿ,
                                                       ಕವಿತಾ ಗೋಪಿಕುಂಟೆ

Wednesday, May 13, 2015

ಪುಟ ಕಾಣದ ಹಳೆ ಸರಕು


ಸದಾ ಜನ ಜಾತ್ರೆಯಂತಿದ್ದ ಮನ
ಸುಖಾ ಸುಮ್ಮನೆ ಒಮ್ಮೆಲೆ
ನೀರಸ ಮೌನದಿ
ಸಾಲು ಪರ್ವತಗಳೆಡೆಗೆ ಜಾರಿ ನಿಂತಿದೆ

ಒಬ್ಬಂಟಿಯಾದಾಗ ಧುಮ್ಮಿಕ್ಕುವ
ಕಹಿ ನೆನಪು, ಅನಾಥ ಭಾವಗಳು
ಪರ್ವತಗಳ ಮಧ್ಯೆ ತೊಯ್ದಾಡಿ ಪ್ರತಿಧ್ವನಿಸಿ
ಮತ್ತಷ್ಟು ಮೊಗದೊಷ್ಟು ಕುಗ್ಗಿಸುತಿವೆ  ಮನವ

***********************************
ಅರಿವಿನ ಕಡಲ ಸೇರಲು
ಜ್ಞಾನದ ನದಿಯು
ಅಜ್ಞಾನದ ಕಟ್ಟೆಯೊಡೆದು ಹರಿಯಬೇಕು

***********************************
ನಮ್ಮ ಸಮಯದ ಹೂಡಿಕೆ ಗೊತ್ತಾಗುವುದು
ನಾವು ಓದಿದ ಪುಸ್ತಕಗಳ ಸಂಖ್ಯೆ ಮತ್ತು ನಾವು
ಮಾಡಿಕೊಂಡ ಹೊಸ ಸ್ನೇಹಿತರ ಸಂಖ್ಯೆಯಿಂದ.

ಹೂಡಿಕೆ ಸರಿಯೋ ತಪ್ಪೋ ಎಂದು ತಿಳಿಯುವುದು
ಆರಿಸಿಕೊಂಡ ಪುಸ್ತಕ ಮತ್ತು ಸ್ನೇಹಿತರಿಂದ.

***********************************
 ಮಾಗಿಯ ಕಾಲದ ಮುಂಜಾವಿನಲಿ
ಗರಿಕೆಗೆ ಅಂಟಿದ ಹನಿಯು ನಾನು
ನನ್ನ ಹಿಮಬಿಂದು ಮಾಡಬಂದ
ಶೀತ ಗಾಳಿ ನೀನು

***********************************
 ವಿದೇಶಿಗರೇ ದೇವರುಗಳಾಗಿ
ವಿದೇಶಿ ಬಂಡವಾಳವೇ ನಾಡಿಯಾಗಿ
ಲಾಭ ನಷ್ಟಗಳೇ ಮಿಡಿತಗಳಾಗಿರುವ
ಬಹು ರಾಷ್ಟ್ರೀಯ ಕಂಪನಿಗಳಲ್ಲಿ
ಮನುಷ್ಯತ್ವ ಸತ್ತು ನಾರುತಿದೆ

***********************************
ವಾಶಿಂಗ್ ಮಷೀನ್ ನಲ್ಲಿ ಒಗೆದಿರೋ ಬಟ್ಟೆಗೂ
ಟಾರ್ಗೆಟ್ , ಡೆಡ್ ಲೈನ್ ಅಂತ ಯೋಚನೆಮಾಡಿ
ಸುಕ್ಕುಹಿಡಿದಿರೋ ಮನಸಿಗೆ ಅಷ್ಟೇನು ವ್ಯತ್ಯಾಸ ಇಲ್ಲ
ಬೆಳಿಗ್ಗೆ ಆಫೀಸ್ ಗೆ ಹೋಗಬೇಕಾದ್ರೆ
ಬಟ್ಟೆಗೆ ಮಾತ್ರ ಅಲ್ಲ ಮನಸಿಗೂ ಇಸ್ತ್ರಿ ಬೇಕು


***********************************
ಏರಿಳಿತದ ರೈತನ ಬಾಳು
ಒಂದು ಮಹಾನ್ ಸಾಗರ
ಆರ್ಭಟಿಸಿ ಅಪ್ಪಳಿಸುವ ಅಲೆಗಳೇ
ಅವನ ಕಷ್ಟ ಕಾರ್ಪಣ್ಯಗಳು
ನುಣು ಮರಳ ಮೇಲಿನ ತಿಳಿನೀರ
ಹಿತ ಸ್ಪರ್ಶವೇ ಸುಗ್ಗಿಯ ಹಿಗ್ಗು
ಆ ನೀರ ರುಚಿಯೇ ಅವನ
ಬೆವರು ಮತ್ತು ಕಣ್ಣೀರ ರುಚಿ  


***********************************
ಹೇಳಲಾಗದ ಅನಿಸಿಕೆಗಳು
ಗೊಂದಲದ ಗಾಳಿಗೆ ಸೇರಿ
ಪರ್ವತಗಳ ಸಾಲಲ್ಲಿ
ಹೊಡೆದಾಡುತಿವೆ
ಹಾನಿ ಆಗದಿದ್ದರೂ
ಆ ಶಬ್ದವೇ ಸಾಕಲ್ಲವೇ
ಚಿತ್ತ ಚಂಚಲಿಸಲು 


***********************************
ಮನಸಿನ ಸಾವಿರಾರು ಯಾತನೆಗಳಿಗೆ 
ಸೂಕ್ತವಾದ ಮಾತ್ರೆ "ಕಡೆಗಣಿಸುವಿಕೆ"  

***********************************
some people set their own path 
and walk in life garden

some people walk in path

 created by others

creating the path is difficult 

but it gives lot of joy

***********************************
ಚುಮು ಚುಮು ಚಳಿಯಲಿ
ಎಳೆ ಬಿಸಿಲಿಗೆ ಮೈಯೊಡ್ಡಿ ನಿಂತಾಗ
ಜಡಿ ಮಳೆಯಲಿ ಮಿಂದೆದ್ದ ಅನುಭವ 


                                                                         ಇಂತಿ,
                                                                         ಕವಿತಾ ಗೋಪಿಕುಂಟೆ