Thursday, October 13, 2016

ತುತ್ತು ಅನ್ನಕ್ಕಾಗಿ

ತಾಯಗರ್ಭದ ಭ್ರೂಣದಿ
ಬೆನ್ನಿಗಂಟುವ ಹಸಿವು
ಉಸಿರು ನಿಂತು ಚಿತೆ
ಏರಿದಾಗಲೇ ಬಿಡುವುದು

ನಮ್ಮಗಳ ಹೋರಾಟ
ದೈನಂದಿನ ಪರದಾಟ
ವಿಲ ವಿಲ ಒದ್ದಾಟ
ತುತ್ತು ಅನ್ನಕ್ಕಾಗಿಯೇ

ವಿಧಿಯಗಾಳಕೆ ಸಿಕ್ಕಿ
ಬಡತನವೆ ಹಾಸಿಗೆ
ಹಸಿವೇ ಹೊದಿಕೆಯಾದಾಗ
ಕಾಡುವುದು ಅನ್ನದ ಕನಸು

ಸ್ಥಾನಮಾನ ಕಾಣದು
ಹಸಿದ ಕಣ್ಣಿಗೆ
ಮನದ ಮಾತು ಕೇಳದು
ಹಸಿದೊಟ್ಟೆಯ ಕೂಗಿಗೆ

ವಿದ್ಯೆ ವಿನಯಗಳ ಮರೆಸಿ
ಮಾನ ಮರ್ಯಾದೆಗಳ ಥಳಿಸಿ
ಕ್ರೌರ್ಯವನು ಮೆರೆಸುವುದು
ಹಸಿವ ನೀಗಿಸುವ
ತುತ್ತು ಅನ್ನಕ್ಕಾಗಿಯೇ

                                         --ಕವಿತಾ ಗೋಪಿಕುಂಟೆ 

Sunday, October 2, 2016

ಕೂಲಿಗಾಗಿ ಕಾಳು


ಬಡವರು ಹೊಟ್ಟೆವರಿಯುವ
ಸಲುವಾಗಿ ಸರ್ಕಾರ
ತಂದಿದೆಯೊಂದು ಯೋಜನೆ
ಅದುವೇ
ಕೂಲಿಗಾಗಿ ಕಾಳು ಯೋಜನೆ

ಬಹುಪಾಲು ಹಳ್ಳಿಗಳಿಗೆ
ಇದರ ಗಂಧವೇ ಸೋಕಿಲ್ಲ
ತಿರುಗಾಡುತಿಹುದು
ಅಧಿಕಾರಿ ಬಳಗದಲ್ಲೆಲ್ಲ

ಉಸ್ತುವಾರಿಯನ್ನು
ಗುತ್ತಿಗೆದಾರ ಪಡೆವ
ಕೆಲಸಕ್ಕಾಗಿ
ಯಂತ್ರಗಳ ತರುವ

ಅಧ್ಯಯನ ತಂಡ
ಇಣುಕುವಾಗ
ನೆಪಮಾತ್ರಕೆ
ಕೂಲಿಯಾಳುಗಳ
ಕರೆತರುವ

ಕೂಲಿಗಾಗಿ ಕಾಳು
ಯೋಜನೆಯಲ್ಲವಿದು  
ಅಧಿಕಾರಿಗಾಗಿ
ಕಾಳು ಯೋಜನೆ

                                            --ಕವಿತಾ ಗೋಪಿಕುಂಟೆ