Thursday, December 22, 2016

ವರುಣ

ವರುಣ ಕೊಟ್ಟರೆ
ನಮಗೆ ಹಿಡಿಯಲಿ
ತಮಿಳುನಾಡಿಗೆ
ಕೊಡುವನು ಬೊಗಸೆಯಲಿ

                      --ಕವಿತಾ ಗೋಪಿಕುಂಟೆ 

ಪಾಠ

ಹರೆಯದ ನೋಟ
ಮಿಂಚಿನ ಓಟ
ತರುವುದು ಬದುಕಿಗೆ
ಬಹುದೊಡ್ಡ ಪಾಠ

             --ಕವಿತಾ ಗೋಪಿಕುಂಟೆ 

Monday, December 19, 2016

ಬಾಳಮುಗಿಲು

ಮುಂಗಾರ ಬಾಳಮುಗಿಲಲ್ಲಿ
ಮೋಡ ಆನಂದದಿ ಕೆಂಪಾಗಿ
ಪ್ರೀತಿ ಕವಿತೆಗಳ ಅಮೃತಸಿಂಚನ
ನವಭಾವ ನವಿಲನರ್ತನ

                      --ಕವಿತಾ ಗೋಪಿಕುಂಟೆ

Monday, December 12, 2016

ತಿಥಿ ನಾಟಕ

ಜೀವನದಿಗಾಗಿ
ಕ್ಯಾತೆತೆಗೆದು
ಜೀವಜಲವ
ಕಸಿದುಕೊಂಡರು

ರಕ್ತಸುರಿಸಿ
ಹೋರಾಡಿದೆವು
ಗುಂಡೇಟಿಗೆ
ಪ್ರಾಣತೆತ್ತೆವು

ನರಳಾಟ ಕಂಡು
ಆರ್ತನಾದ ಕೇಳಿ
ಮನ ಕರಗದೇ
ನಿಂತರವರು

ವರುಣನೆ ಕರಗಿ
ಸಾಕೆನುವಷ್ಟು ಹರಸಿ
ದೋಣಿ ಭಾಗ್ಯ
ತಂದನು

ಮಡಿದವನ ಕೂಗು
ಮನೆಯವರ ಶಾಪ
ದೇವರ ತಲುಪಿ
ತಿಥಿಯ ನಾಟಕ
ನಿಜವಾಗಿಸಿದನು

                      --ಕವಿತಾ ಗೇೂಪಿಕುಂಟೆ

Sunday, December 11, 2016

ಮರೆತಿದ್ದರೆ ದುಡ್ಡು

ಹೋಟೆಲ್ಲಲ್ಲಿ ತಿಂದುಂಡು
ಮರೆತಿದ್ದರೆ ತರಲು ದುಡ್ಡು
ಆಗೆಲ್ಲಾ
ರುಬ್ಬಬೇಕಿತ್ತು ಅಕ್ಕಿಹಿಟ್ಟು
ಈಗೆಲ್ಲಾ
ಉಜ್ಜಬೇಕು ಕಾರ್ಡುಇಟ್ಟು

                      --ಕವಿತಾ ಗೋಪಿಕುಂಟೆ  

Thursday, December 8, 2016

ಡೆಲಿವರಿ

ಸಿಜೇರಿಯನ್
ಡೆಲಿವರಿಯಲ್ಲುಟ್ಟಿದ
ಕವಿತೆಗಿಂತ
ನಾರ್ಮಲ್
ಡೆಲಿವರಿಯಲ್ಲುಟ್ಟಿದ
ಕವಿತೆ
ಭಾವಪೂರ್ಣ
ಅರ್ಥಪೂರ್ಣ


       --ಕವಿತಾ ಗೇೂಪಿಕುಂಟೆ

ಹಿ(ತೈಷಿ)ತಶತ್ರು

ಹಿತೈಷಿಗಳ ಹಿತ
ನುಡಿಗಳ ಶಕ್ತಿಗಿಂತ
ಹಿತಶತ್ರುಗಳ ಚುಚ್ಚುಮಾತಿನ
ಇರಿತದ ನೋವೇ ಮೇಲು
ಮಲಗಿರುವ ಮನವ
ಬಡಿದೆಬ್ಬಿಸಲು
ಸಾಧನೆಯ ಹಾದಿಯ
ಹುಡುಕಲು ಪ್ರೇರೇಪಿಸಲು

          --ಕವಿತಾ ಗೇೂಪಿಕುಂಟೆ

ನಾ ಕಟ್ಟುವ ಕವಿತೆ

ಕಟ್ಟಬೇಕೊಂದು ಕವಿತೆಯ
ಜೀತದಾಳ ಮೈಮೇಲಿನ
ಬಾಸುಂಡೆಗಳ ತಂದು
ಅಸಹಾಯಕ ಹೆಣ್ಣುಗಳ
ಕಣ್ಣೀರ ಮುತ್ತುಗಳ ತಂದು
ಬಡವ ಸವೆಸಿದ
ಮೂಳೆಗಳ ತಂದು

ನಾ ಕಟ್ಟಿದ ಕವಿತೆ
ಉಳ್ಳವರ ಕತ್ತಿಗೆ
ಉರುಳಾಗಬೇಕು
ಕಾಳಧನಿಕರ ಕಾಲಿಗೆ
ಸರಪಳಿಯಾಗಬೇಕು
ದರ್ಪತೋರ್ವನಿಗೆ
ದಂಡಿಸಲೆಬೇಕು

ನೊಂದವರಲ್ಲಿ
ನಿಟ್ಟುಸಿರ ತರಬೇಕು
ಹೆಂಗೆಳೆಯರಲ್ಲಿ  
ಮಂದಹಾಸ ಬಿರಿಸಬೇಕು
ಕಾಲಾದ ನನ್ನವರಿಗೆ
ಚಿರಶಾಂತಿ ಕೊಡಿಸಲುಬೇಕು


                                  --ಕವಿತಾ ಗೇೂಪಿಕುಂಟೆ

ಮೂರು ಸಾಲು

ಮದುವೆ ದಿನದಿ
ತುಂಬಿಸಿಟ್ಟೆವು *ಆನಂದ*ದಿ
*ಕವಿತೆ*ಗಳ ಕೊಡದೊಳಗೆ

ಸಂಸಾರ ನೊಗ ಹೊತ್ತು
ಉಳಲು ನಿಂತೆವು
ಹಸನಾಗಿಸಲು ಬಾಳದಾರಿ

ಕ್ಷಣಾರ್ಧದಲಿ
ಕಾಣೆಯಾಗಿವೆ
ಮೂರು ಕವಿತೆಗಳು

ಬಾಳಹೊಲದೊಳಗೆ
ಮೂಡಿಹೆವು
ಮೂರು ಸಾಲುಗಳು

ಕಾಣೆಯಾದ ಕವಿತೆಗಳಲಿ
ಮೂಡಿದ ಸಾಲ್ಗಳಲಿ
ಏನಿದೆಯೆಂದಷ್ಟೇ ಗೊತ್ತೆಮಗೆ

ಉಳಿದ ಕವಿತೆಗಳ
ಮೂಡುವ ಸಾಲುಗಳ
ಬಲ್ಲವನು ಅವನಷ್ಟೆ

                     --
ಕವಿತಾ ಗೇೂಪಿಕುಂಟೆ

ಶಾಲಾಲಂಗ

ರೈತನೊಬ್ಬನ ಮಗಳ
ಶಾಲಾಲಂಗದ ಮೇಲಿನ
ಹರಿದೊಲಿದ ಗಂಟುಗಳು
ಅಪ್ಪನ ಬೆನ್ನ
ಮೇಲಿನ ಬರೆಗಳು
ಅಮ್ಮನ ಅಸಹಾಯಕತೆಯ
ಮೊಗದ ಗೆರೆಗಳು
ಬಡವಳೆಂದು ಸಾರುವ
ಹಣೆಪಟ್ಟಿಗಳು
ಅವಳ ಕೆರಳಿಸುವ ಕಲೆಗಳು
ಛಲವ ಮೊಗೆವ ಚಡಿಗಳು
ಕೊನೆಗೆ
ಅವಳ ಸಾಧನೆಯ ಸಾರುವ
ಪಳೆಯುಳಿಕೆಗಳು
               --ಕವಿತಾ ಗೇೂಪಿಕುಂಟೆ

ಮರುಜನ್ಮ

ಸಾವಿನಾಚೆಗೆ ನಿಂತಿದೆ
ಸತ್ತುಟ್ಟುವ ಜನ್ಮ
ತಾಯಿಯಾಗಿ ಪಡೆವ
ಮರುಜನ್ಮ

              --ಕವಿತಾ ಗೇೂಪಿಕುಂಟೆ

ತ್ಯಾಗಮಯಿ


ನನ್ನಸಿದೊಟ್ಟೆಯ ಕೂಗು
ಅವ್ವನ ಕಾಲ್ಗೆಜ್ಜೆ ಸದ್ದು
ಬಿಕ್ಕಳಿಕೆಯೆ ಅವಳ
ಕೈಬಳೆ ನಾದ

ಒಲೆಕಿಡಿ ಕಾರಿದ ಕುಪ್ಪಸದ ಚುಕ್ಕಿ
ಚಂದಮ್ಮನ ಮೇಲಕಲೆ
ನೊಂದರಿದ ಸೀರೆ
ತೆಂಗಿನ ಚಪ್ಪರ

ಗಂಜಿಯ ಕುಡಿದು ಜೊಲ್ಲನು ಸುರಿಸಿ
ತೀಡಿದೆನು ಕುಪ್ಪಸಕೆ
ಮಳೆಗು ಬಿಸಿಲಿಗು ಗುಮ್ಮವ ಕಂಡು
ಅಡಗಿದೆನು ಸೆರಗಿನಲಿ

ಗೊಣ್ಣೆಗೆ ರಟ್ಟಾದ ಕುಪ್ಪಸವನೆ ತೊಟ್ಟು
ಉಚ್ಚೆಯಲಿ ತೊಯ್ದ ಸೀರೆಯ ಉಟ್ಟು
ಎಲ್ಲವ ಸಹಿಸಿ  ಎಲ್ಲವ ತೊರೆದು
ಜೀವಕ್ಕಾಗಿ ಜೀವವನೇ ತೇಯ್ದಳು

ಜಗವನು ಗೆದ್ದ ಕೀರ್ತಿಯನೆಲ್ಲ
ಅವಳ ಮೂಗುತಿಯಲ್ಲೇ ಇರಿಸುವೆನು
ಜಗದೆಲ್ಲ ಸುಖವನು ತಂದು
ಅವಳ ಕಾಲ್ಕೆಳಗೆ ಇರಿಸುವೆನು

                                  --ಕವಿತಾ ಗೋಪಿಕುಂಟೆ