Sunday, April 7, 2013

ನಾ ಬರೀ ಭ್ರೂಣವಲ್ಲ


ಕರುಳ ಕುಡಿ ಚಿಗುರುತಿಹುದು
ಎಂದು ನೀ ತಿಳಿದಾಗ
ಎಷ್ಟು ಸಂತೋಷ ಪಟ್ಟೆ
ಅದೇ ನಾ ಹೆಣ್ಣೆಂದು ತಿಳಿದಾಗ
ಏಕೆ ಈ ಬೇಕು ಬೇಡಗಳ ತೊಳಲಾಟ

ನಾ ಬರೀ ಭ್ರೂಣವಲ್ಲ
ನಿನ್ನದೇ ಒಂದು ಭಾಗ
ನಿನ್ನುಸಿರಿನ ಉಸಿರು
ನಿನ್ನದೇ ಒಂದು ಕನಸು
ಅದು ನಿನಗೆ ತಿಳಿಯದೆ

ನಾ ನಿನಗೆ ಬೇಡವೋ
ಈ ಪ್ರಪಂಚಕ್ಕೆ ಬೇಡವೋ
ಅದ ನಾನರಿಯೆ
ಆದರೂ ತಿಳಿಯುತಿಹುದು ನನಗೆ
ಅನಿಷ್ಟವೆಂದು ಕಟ್ಟಿರುವ ಹಣೆಪಟ್ಟ

ನಾನೊಂದು ಜೀವ
ನನಗೊಂದು ಮನಸಿದೆ
ಅದಕು ಸಾವಿರ ಕನಸಿದೆ
ಕಣ್ಣಬಿಡುವ ಮುನ್ನವೆ
ಕಳಚಿ ಹಾಕುವ ಮನವೇಕೆ

ಹೆಣ್ಣೆಂಬ ಕಾರಣಕೆ
ಹುಣ್ಣಂತೆ ಕಂಡು
ಹಣ್ಣಂತೆ ಕೊಚ್ಚಿ
ಪ್ರಾಣವ ಹಿಂಡುವ
ಕಲ್ಲು ಹೃದಯವೇಕೆ

ನನ್ನ ಮಿಡಿತವನರಿಯದೆ
ಮಣ್ಣಾಗಿಸುವ ಮುನ್ನ
ನೀ ಕೂಡ ಹೆಣ್ಣಿಂದಲೇ 
ಕಣ್ಣ ಬಿಟ್ಟಿರುವೆಯೆಂಬ
ಸತ್ಯವ ಮರೆತೆಯೇಕೆ

         ಇಂತಿ,
                 ಕವಿತಾಗೌಡ

No comments:

Post a Comment

Note: Only a member of this blog may post a comment.