Sunday, April 21, 2013

21/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಸುಗ್ಗಿಯ ಹಿಗ್ಗು "


ಬೇಸಾಯವನೇ  ಕುಲಕಸುಬಾಗಿಸಿದ
ಜನಗಳಿಗೆಲ್ಲ ಅನ್ನದಾತರೆಂದು ಕರೆಯುವರು
ರೈತನೇ ದೇಶದ ಬೆನ್ನೆಲುಬೆಂದು
ಮಹಾತ್ಮರೆಲ್ಲಾ ಹೇಳುವರು

ಮಳೆ ಬಿಸಿಲೆನ್ನದೆ
ಚಳಿ ಜ್ವರ ಲೆಕ್ಕಿಸದೆ
ಸೊಂಟಕೆ ಬಟ್ಟೆಯ ಬಿಗಿದು
ನೇಗಿಲ ಹಿಡಿದು ಮುನ್ನುಗ್ಗುವರು

ಕಲ್ಲು ಮುಳ್ಳುಗಳ ಪರಿವೇ ಇಲ್ಲದೆ
ಬರಿಗಾಲ ಪಕೀರನಂತೆ ಹೊಲದಲ್ಲೆಲ್ಲಾ  ತಿರುಗುವರು
ಎಷ್ಟೇ ದುಡಿದರು ಎಷ್ಟೇ ದಣಿದರು
ಸದಾ ಹಸನ್ಮುಖಿಗಳಾಗಿರುವರು

ಕಾರ್ಮೋಡವ ಕಂಡು ಬೀಜವ ಬಿತ್ತಿ
ಕುಡಿ ಹೊಡೆದ ಪೈರನ್ನ ಒಡಲಕುಡಿಯಂತೆ ಸಲಹಿ
ಹೊಂಗನಸ ಕಾಣುತ್ತ ಆರು ಮಾಸಗಳ ದೂಡುವರು
ತೆನೆ ಹೊಡೆದು ಬಲಿತಾಗ ಸುಗ್ಗಿಗಾಗಿ ಕಾಯುವರು

ಬೇಸಾಯ ಮನೆ ಮಕ್ಕಳೆಲ್ಲಾ
ಸಾಯಾ ಎಂಬ ಗಾದೆ ಮಾತಂತೆ
ಮಕ್ಕಳಿಂದಿಡಿದು  ಮುದುಕರವರೆಗೆ
ಎಲ್ಲರು ಸೇರಿ ದುಡಿಯುವರು

ಕಣ ಬಳಿದು ಹಸನಾಗಿಸಿ
ತೆನೆ ಕೊಯ್ದು ಹಾಸಿ
ದನಕರುಗಳಿಂದ ತೆನೆಯನ್ನು ತುಳಿಸಿ
ತೂರುತ್ತ ಕೇರುತ್ತ ಹಾಡಿ ಕೊಂಡಾಡುವರು

ಧಾನ್ಯದ ರಾಶಿ ಹಾಕಿ ಕಣವನ್ನೆಲ್ಲ ಸಿಂಗರಿಸಿ
ಭೂದೇವಿಗೆ ನಮಸ್ಕರಿಸಿ ಅಷ್ಟದಿಕ್ಕುಗಳಿಗೆ ನೀವಳಿಸಿ
ಸುಗ್ಗಿಯ ಸವಿಯನ್ನು ಹಿಗ್ಗಿ ಹಿಗ್ಗಿ ಸವಿಯುತ
ಧಾನ್ಯಲಕ್ಷ್ಮಿಯನು ಮನೆ ತುಂಬಿಸಿಕೊಳ್ಳುವರು 


 ಇಂತಿ,
         ಕವಿತಾಗೌಡ

No comments:

Post a Comment

Note: Only a member of this blog may post a comment.