Tuesday, September 3, 2013

ನಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ನನ್ನ ಪುಸ್ತಕ "ಮೂಕರಾಗ" ದ ಬಗ್ಗೆ

ನಾನು ಕೆಲಸ ಮಾಡುತ್ತಿರುವುದು ಬಹುರಾಷ್ಟ್ರೀಯ ಕಂಪನಿಯಲ್ಲಿ. ಎಚ್ ಆರ್ ಗೆ ನನ್ನ ಪುಸ್ತಕದ ಬಗ್ಗೆ ಹೇಳಿದಾಗ ಪುಸ್ತಕದ ಬಗ್ಗೆ ಮಾಹಿತಿ ಪಡೆದು ಕಂಪನಿಯ ನಿಯತಕಾಲಿಕ ದಲ್ಲಿ ಪ್ರಕಟಿಸಿದ್ದಾರೆ. ಬರೀ ಹಿಂದಿ ಮತ್ತು ಅಂಗ್ಲ ಭಾಷೆಯೇ  ರಾರಾಜಿಸುವಲ್ಲಿ ನಮ್ಮ ಕನ್ನಡ ನೋಡಿ ಬಹಳ ಕುಶಿ ಆಯಿತು.




Wednesday, July 3, 2013

ನನ್ನ ಕವನ ಸಂಕಲನ "ಮೂಕರಾಗ" ದ ಬಿಡುಗಡೆ ಸಮಾರಂಭದ ಸುತ್ತ

ಗೀತಚೇತನ ಎನ್ನುವ ಪ್ರಕಾಶನವನ್ನು ಹುಟ್ಟಿಹಾಕಿ 30 ಜೂನ್ 2013 ರಂದು ನನ್ನ ಮೊದಲ ಕವನ ಸಂಕಲನ "ಮೂಕರಾಗ" ವನ್ನು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ನವರು ಬಿಡುಗಡೆ ಮಾಡಿದರು. ಖ್ಯಾತ ಲೇಖಕರಾದ ಡಾ. ಮನು ಬಳಿಗಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಿಮರ್ಶಕರಾದ ಬೈರಮಂಗಲ ರಾಮೇಗೌಡರು, ಚಲನಚಿತ್ರ ನಿರ್ಮಾಪಕರಾದ ಮುರುಳೀಧರ ಹಾಲಪ್ಪ ಮತ್ತು ಅನಿಕೇತನ ಕನ್ನಡ ಬಳಗದ ಅಧ್ಯಕ್ಷರಾದ ಮಾಯಣ್ಣ ಅವರು ಉಪಸ್ಥಿತರಿದ್ದರು.

02/07/2013 ರ ಪ್ರಜಾವಾಣಿ ಪತ್ರಿಕೆಯಲ್ಲಿ
02/07/2013 ರ ವಿಜಯಕರ್ನಾಟಕ ಪತ್ರಿಕೆಯಲ್ಲಿ
01/07/2013 ರ ಕನ್ನಡಪ್ರಭ ಪತ್ರಿಕೆಯಲ್ಲಿ
01/07/2013 ರ ಉದಯವಾಣಿ ಪತ್ರಿಕೆಯಲ್ಲಿ
01/07/2013 ರ ವಿಜಯವಾಣಿ ಪತ್ರಿಕೆಯಲ್ಲಿ







Sunday, April 21, 2013

21/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಸುಗ್ಗಿಯ ಹಿಗ್ಗು "


ಬೇಸಾಯವನೇ  ಕುಲಕಸುಬಾಗಿಸಿದ
ಜನಗಳಿಗೆಲ್ಲ ಅನ್ನದಾತರೆಂದು ಕರೆಯುವರು
ರೈತನೇ ದೇಶದ ಬೆನ್ನೆಲುಬೆಂದು
ಮಹಾತ್ಮರೆಲ್ಲಾ ಹೇಳುವರು

ಮಳೆ ಬಿಸಿಲೆನ್ನದೆ
ಚಳಿ ಜ್ವರ ಲೆಕ್ಕಿಸದೆ
ಸೊಂಟಕೆ ಬಟ್ಟೆಯ ಬಿಗಿದು
ನೇಗಿಲ ಹಿಡಿದು ಮುನ್ನುಗ್ಗುವರು

ಕಲ್ಲು ಮುಳ್ಳುಗಳ ಪರಿವೇ ಇಲ್ಲದೆ
ಬರಿಗಾಲ ಪಕೀರನಂತೆ ಹೊಲದಲ್ಲೆಲ್ಲಾ  ತಿರುಗುವರು
ಎಷ್ಟೇ ದುಡಿದರು ಎಷ್ಟೇ ದಣಿದರು
ಸದಾ ಹಸನ್ಮುಖಿಗಳಾಗಿರುವರು

ಕಾರ್ಮೋಡವ ಕಂಡು ಬೀಜವ ಬಿತ್ತಿ
ಕುಡಿ ಹೊಡೆದ ಪೈರನ್ನ ಒಡಲಕುಡಿಯಂತೆ ಸಲಹಿ
ಹೊಂಗನಸ ಕಾಣುತ್ತ ಆರು ಮಾಸಗಳ ದೂಡುವರು
ತೆನೆ ಹೊಡೆದು ಬಲಿತಾಗ ಸುಗ್ಗಿಗಾಗಿ ಕಾಯುವರು

ಬೇಸಾಯ ಮನೆ ಮಕ್ಕಳೆಲ್ಲಾ
ಸಾಯಾ ಎಂಬ ಗಾದೆ ಮಾತಂತೆ
ಮಕ್ಕಳಿಂದಿಡಿದು  ಮುದುಕರವರೆಗೆ
ಎಲ್ಲರು ಸೇರಿ ದುಡಿಯುವರು

ಕಣ ಬಳಿದು ಹಸನಾಗಿಸಿ
ತೆನೆ ಕೊಯ್ದು ಹಾಸಿ
ದನಕರುಗಳಿಂದ ತೆನೆಯನ್ನು ತುಳಿಸಿ
ತೂರುತ್ತ ಕೇರುತ್ತ ಹಾಡಿ ಕೊಂಡಾಡುವರು

ಧಾನ್ಯದ ರಾಶಿ ಹಾಕಿ ಕಣವನ್ನೆಲ್ಲ ಸಿಂಗರಿಸಿ
ಭೂದೇವಿಗೆ ನಮಸ್ಕರಿಸಿ ಅಷ್ಟದಿಕ್ಕುಗಳಿಗೆ ನೀವಳಿಸಿ
ಸುಗ್ಗಿಯ ಸವಿಯನ್ನು ಹಿಗ್ಗಿ ಹಿಗ್ಗಿ ಸವಿಯುತ
ಧಾನ್ಯಲಕ್ಷ್ಮಿಯನು ಮನೆ ತುಂಬಿಸಿಕೊಳ್ಳುವರು 


 ಇಂತಿ,
         ಕವಿತಾಗೌಡ

Wednesday, April 10, 2013

11/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಮತ್ತೆ ಬಂದಿದೆ ಯುಗಾದಿಯು "


ಮತ್ತೆ ಬಂದಿದೆ ಯುಗಾದಿಯು

ಬರಡಾಗಿ ನಿಂತ ಮರಕೆ
ಮತ್ತೆ ಕಳೆಯ ತುಂಬಲು
ಚಿಗುರೊಡೆದು ಹಸಿರಾಗಿ
ಮತ್ತೆ ಬಂದಿದೆ ಯುಗಾದಿಯು

ಹೊಂಗೆ ಜೇನ ಸಂಭ್ರಮದಿ
ಕೋಗಿಲೆಯ ಹೊಸ ಧ್ವನಿಯಲಿ
ಹೊಸ ವರುಷದ ಹೊಸ ನಾದದಿ
ಮತ್ತೆ ಬಂದಿದೆ ಯುಗಾದಿಯು

ಬಿತ್ತು ಹೊತ್ತು ದಣಿದ ರೈತನಿಗೆ
ಬಿಡುವು ಕೊಡಲೆಂಬಂತೆ
ಹೊಸ ವರುಷದ ಹರುಷವ
ಕೊಂಡು ತಂದಿದೆ ಈ ಯುಗಾದಿಯು

ಬಿರಿದು ಉರಿಯುತಿರುವ
ಮೈ ತಣಿಸಲು
ಎಣ್ಣೆ ಸ್ನಾನದ ನೆಪದಲಿ
ಮತ್ತೆ ಬಂದಿದೆ ಯುಗಾದಿಯು

ತಳಿರು ತೋರಣ ಕಟ್ಟಿ
ಸಿಹಿ ಊರಣದ ಹೊಬ್ಬಟ್ಟನ್ನು ತಟ್ಟಿ
ಬೇವು ಬೆಲ್ಲದ ಜೊತೆಗೆ
ಜೀವನದಿ ಸಿಹಿ ಕಹಿಯ ಸಮನಾಗಿ ಸಂಭ್ರಮಿಸಲು
ಮತ್ತೆ ಬಂದಿದೆ ಯುಗಾದಿಯು

ಇಂತಿ,
      ಕವಿತಾಗೌಡ


Sunday, April 7, 2013

7/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ "ನಾ ಬರೀ ಭ್ರೂಣವಲ್ಲ"

ನಾ ಬರೀ ಭ್ರೂಣವಲ್ಲ


ಕರುಳ ಕುಡಿ ಚಿಗುರುತಿಹುದು
ಎಂದು ನೀ ತಿಳಿದಾಗ
ಎಷ್ಟು ಸಂತೋಷ ಪಟ್ಟೆ
ಅದೇ ನಾ ಹೆಣ್ಣೆಂದು ತಿಳಿದಾಗ
ಏಕೆ ಈ ಬೇಕು ಬೇಡಗಳ ತೊಳಲಾಟ

ನಾ ಬರೀ ಭ್ರೂಣವಲ್ಲ
ನಿನ್ನದೇ ಒಂದು ಭಾಗ
ನಿನ್ನುಸಿರಿನ ಉಸಿರು
ನಿನ್ನದೇ ಒಂದು ಕನಸು
ಅದು ನಿನಗೆ ತಿಳಿಯದೆ

ನಾ ನಿನಗೆ ಬೇಡವೋ
ಈ ಪ್ರಪಂಚಕ್ಕೆ ಬೇಡವೋ
ಅದ ನಾನರಿಯೆ
ಆದರೂ ತಿಳಿಯುತಿಹುದು ನನಗೆ
ಅನಿಷ್ಟವೆಂದು ಕಟ್ಟಿರುವ ಹಣೆಪಟ್ಟ

ನಾನೊಂದು ಜೀವ
ನನಗೊಂದು ಮನಸಿದೆ
ಅದಕು ಸಾವಿರ ಕನಸಿದೆ
ಕಣ್ಣಬಿಡುವ ಮುನ್ನವೆ
ಕಳಚಿ ಹಾಕುವ ಮನವೇಕೆ

ಹೆಣ್ಣೆಂಬ ಕಾರಣಕೆ
ಹುಣ್ಣಂತೆ ಕಂಡು
ಹಣ್ಣಂತೆ ಕೊಚ್ಚಿ
ಪ್ರಾಣವ ಹಿಂಡುವ
ಕಲ್ಲು ಹೃದಯವೇಕೆ

ನನ್ನ ಮಿಡಿತವನರಿಯದೆ
ಮಣ್ಣಾಗಿಸುವ ಮುನ್ನ
ನೀ ಕೂಡ ಹೆಣ್ಣಿಂದಲೇ 
ಕಣ್ಣ ಬಿಟ್ಟಿರುವೆಯೆಂಬ
ಸತ್ಯವ ಮರೆತೆಯೇಕೆ

         ಇಂತಿ,
                 ಕವಿತಾಗೌಡ

Sunday, March 3, 2013

3/3/2013 ರ ಪ್ರಜಾ ಪ್ರಗತಿ ದಿನಪತ್ರಿಕೆಯಲ್ಲಿ ನನ್ನಕವನ "ಬರಗಾಲದ ತಾಂಡವ"



ಬರಗಾಲದ ತಾಂಡವ


ಬರಗಾಲ ಬಂದಿಹುದು
ಕೆರೆ ಬತ್ತಿ ಬರಿದಾಗಿಹುದು
ಹೊಲ ಒಣಗಿ ಬಿರಿಯುತಿಹುದು
ಭೂಮಿ ಕಾದು ಸುಡುತಿಹುದು 

ಮನೆಯಲ್ಲಿ ಕಾಳಿಲ್ಲ
ಕೈಯಲ್ಲಿ ಕಾಸಿಲ್ಲ
ದನಕರುಗೆ ಮೇವಿಲ್ಲ
ಊರಲ್ಲಿ ಕಳೆ ಇಲ್ಲ

ಪ್ರತಿನಿತ್ಯ ಉಪವಾಸ
ನೀರಿಗೂ ಪರದಾಟ
ಪ್ರಾಣಿಗಳ ಚೀರಾಟ
ನರರ ನರಳಾಟ 

ನೂರಾರು ಬೇನೆಗಳು
ಸಾಲು ಸಾಲು ಸಾವುಗಳು
ಮುಗಿಲು ನೋಡೊ ಕಣ್ಣುಗಳು
ಅಸಹಾಯಕ ಮುಖಗಳು 

ಊರು ಊರಾಗಿಲ್ಲ ಸ್ಮಶಾನವಾಗಿಹುದು
ಎಲ್ಲೆಲ್ಲು ಸೂತಕದ ಛಾಯೆ ಆವರಿಸಿಹುದು
ದೇಹ ಬೆಂಡಾಗಿಹುದು
ಮನಸು ಬೆಂದೋಗಿಹುದು
 

ಮಳೆರಾಯ ಕರುಣೆಯಿಟ್ಟು
ನನ್ನೂರಿಗೆ ಬಾ ಇಂದು
ಸೂತಕವ ಕಳೆದು ತುಂಬು ಹೊಸ ಜೀವಕಳೆಯನ್ನು
ಕೊಡು ಎಲ್ಲರಲಿ ಚೈತನ್ಯವನ್ನು

        ಇಂತಿ,
                 ಕವಿತಾ ಗೌಡ

Thursday, February 28, 2013

ಕಡಲತೀರದ ನೀನಿಲ್ಲದ ಪಯಣ

ಮುಸ್ಸಂಜೆ ವೇಳೆಯಲಿ
ಕಡಲ ತೀರದಲಿ
ಬೀಸುವ ತಿಳಿ ಗಾಳಿಯಲಿ
ನೀ ಬಂದು ನನ್ನ ಜೊತೆಯಾದಂತೆ
ಭಾಸವಾಗುತಿದೆ ನನಗಿಂದು

ನುಣುಪಾದ ಮರಳಿನಲಿ
ತಿಳಿ ನೀರ ಸ್ಪರ್ಶದಲಿ
ನೀನಿಟ್ಟ ಹೆಜ್ಜೆಗಳೆ
ನೆನಪಾಗುತಿವೆ ಇಂದು
ಪ್ರತಿ ಹೆಜ್ಜೆಯಲು ಕಾಡುತಿವೆ ಇಂದು

ಕಡಲಲೆಗಳ ಭೋರ್ಗರೆತಕೆ
ನಿನ ಮಾತೆ ನೆನಪಾಗಿದೆ ಇಂದು
ನೀ ಕಟ್ಟಿದ ಮರಳುಗೂಡು
ಕಣ್ಣಿಗೆ ಕಟ್ಟಿದಂತಿದೆ ಇಂದು
ಕಣ್ಣೀರಲ್ಲೆ  ಕರಗುತಿದೆ ಇಂದು

ಕಳೆದುಹೋದ ಕ್ಷಣಗಳು
ಆಡಿದಂತ ಮಾತುಗಳು
ಮಾಡಿದಂತ ಆಣೆ ಭಾಷೆಗಳು
ಬರಿ ನೆನಪಾಗಿವೆ ಇಂದು
ಪ್ರತಿಕ್ಷಣವು ಕೊಲ್ಲುತಿವೆ ಇಂದು 
ಇಂತಿ,
           ಕವಿತಾ ಗೌಡ