Monday, March 26, 2012

ಕಾಯುತಿರುವೆನು ಗೆಳತಿ ನೀ ಬರುವ ದಾರಿಯನು...


ಮನಸೆಂಬ ಊರಲಿ
ಕನಸಿನ ಸೌಧವ ಕಟ್ಟಿ
ಸೌಧಕೆ ಪ್ರೀತಿಯ
ಶಿಖರವನಿಟ್ಟು ಅಲಂಕರಿಸಲು
ಕಾಯುತಿರುವೆನು ಗೆಳತಿ
ನೀ ಬರುವ ದಾರಿಯನು

ಜೀವನ ದೀಪವನಿಟ್ಟು
ಪ್ರೀತಿ ಪ್ರೇಮಗಳೆಂಬ
ಎಣ್ಣೆ ಬತ್ತಿಯ ಹಾಕಿ
ದೀಪವನು ಉರಿಸಲು
ಕಾಯುತಿರುವೆನು ಗೆಳತಿ
ನೀ ಬರುವ ದಾರಿಯನು

ಜೀವನದ ಪಯಣದಲಿ
ಪಯಣ ಮದ್ಯ ದಾರಿಯಲಿ
ಒಂಟಿ ಪಯಣವ ತ್ಯಜಿಸಿ
ನಿನ್ನ ಜೊತೆ ಪಯಣಿಸಲು
ಕಾಯುತಿರುವೆನು ಗೆಳತಿ
ನೀ ಬರುವ ದಾರಿಯನು

ಸಂವತ್ಸರದ ಬಾಳಲಿ
ಬೇವುಬೆಲ್ಲದ ಸಿಹಿಕಹಿಯ
ಒಂಟಿಯಾಗಿ ತಿಂದು
ಸಾಕಾಗಿ
ನಿನ್ನ ಜೊತೆ ಹಂಚಲು
ಕಾಯುತಿರುವೆನು ಗೆಳತಿ
ನೀ ಬರುವ ದಾರಿಯನು
                                        ಇಂತಿ
                                                  ಕವಿತಾ ಗೌಡ


Tuesday, March 20, 2012

ಬಾಳ ಸಂತೆಯಲಿ ...


ಬಾಳ ಸಂತೆಯಲಿ
ಯಾರಿಗಿಲ್ಲ ಚಿಂತೆ
ಎಲ್ಲರಿಗು ಇಹುದಿಲ್ಲಿ
ನೋವು ನಲಿವುಗಳ ಕಂತೆ

ಹುಟ್ಟಿರುವುದಕು ಚಿಂತೆ
ಸಾಯುವುದಕು ಚಿಂತೆ
ನಡುವೆ ಇರುವ ಮೂರು
ದಿನಗಳ ಕಳೆಯುವುದಕು ಚಿಂತೆ

ಕೆಲವರಿಗೆ ಇಂದಿನ ಚಿಂತೆ
ಕೆಲವರಿಗೆ ಮುಂದಿನ ಚಿಂತೆ
ಮತ್ತೆ ಕೆಲವರಿಗೆ ಹಿಂದಿನ ಚಿಂತೆ
ಎಲ್ಲರಿಗು ಇಹುದಿಲ್ಲಿ ಕಂತೆಗಳ ಚಿಂತೆ

ಒಂದಿಷ್ಟು ಮಂದಿಗೆ ಅವರವರ ಚಿಂತೆ
ಮತ್ತಷ್ಟು ಮಂದಿಗೆ ಬೇರೆಯವರ ಚಿಂತೆ
ಅವರವರ ಚಿಂತೆಗೆ ಅರ್ಥವಿದೆ ಕಂತೆಯಲಿ
ಬೇರೆಯವರ ಚಿಂತೆಯಲಿ ಏನಿಹುದು ನಾನರಿಯೆ

ಚಿಂತೆಗಳ ಕಂತೆಯಿಂದಿದೆ ಚಿತೆ
ಎಣಿಸಿದಷ್ಟು ಮುಗಿಯದು
ಕಂತೆಗಳ ಸಂಖ್ಯೆ
ಎಣಿಸುತ್ತ  ಎಣಿಸುತ್ತ ಚಿತೆಯ ಅಪ್ಪುವವರೆಷ್ಟು ಜನ

ಚಿಂತೆಗಳ ಕಂತೆಗಳನು ಎಣಿಸದೆ
ಬದುಕುವವ ನಿಜವಾದ ಜಾಣ
ಜಾಣತನವ ಅರಿಯಲು
ಬೇಕು ಒಂದಿಷ್ಟು ಚಿಂತೆ

ಸಂತೆಗೂ ಚಿಂತೆಗೂ ಇಹುದಿಲ್ಲಿ ಸಂಬಂಧ
ಸಂತೆಯಿಲ್ಲದೆ ಚಿಂತೆಯಿಲ್ಲ
ಚಿಂತೆಯಿಲ್ಲದೆ ಸಂತೆಯಿಲ್ಲ
ಇದನರಿತು ಬಾಳು ನೀ ಬಾಳ ಸಂತೆಯಲಿ

                                              ಇಂತಿ
                                                        ಕವಿತಾ ಗೌಡ

Monday, March 12, 2012

ತಾಯಿ ಮತ್ತು ತಾಯಿನಾಡು...

ತಾಯಿ ಜನುಮದಾತೆ, ತಾಯಿ ಮಮತಾಮಯಿ, ತಾಯಿಯೇ ಮೊದಲ ಗುರು ತಾಯಿ ಅಂದ್ರೇನೆ ಎಲ್ಲಾ.

ಹೀಗೆ ತಾಯಿಯನ್ನ ಪ್ರಪಂಚದಲ್ಲಿ ಇರೋ ಪ್ರತಿಯೊಂದು ಮಗುವು ವರ್ಣಿಸುತ್ತದೆ. ತಾಯಿ ಬಗ್ಗೆ ಬರೆಯದ ಕವಿಗಳೇ ಇಲ್ಲ. ಹಾಗೆ ತಾಯಿನಾಡಿನ ಬಗ್ಗೆ ಕೂಡ ನಾ ಜಾಸ್ತಿ ಹೇಳಬೇಕಾಗಿಲ್ಲ ತಾಯಿನಾಡೆ ಸ್ವರ್ಗ.

ಅಂದ ಹಾಗೆ ನಾ ಇಲ್ಲಿ ನಿಮಗೆಲ್ಲ ಹೇಳಬೇಕು ಅನ್ಕೊಂಡಿರೋದು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ತಾಯಿ ಮತ್ತು ತಾಯಿನಾಡಿನ ನಿಜವಾದ ಬೆಲೆ, ಅವರು ನಮಗೆ ಕೊಡೊ ಪ್ರೀತಿಯ ಅರ್ಥ ಗೊತ್ತಾಗೋದು ಯಾವಾಗ ಅಂತ.

ನಮ್ಮ ತಾಯಿ ನಮಗೆ ಎಷ್ಟು ಪ್ರೀತಿ ತೋರಿಸಿದರು ನಾವು ಅವಳ ಜೊತೆ ಇದ್ದಾಗ ನಾವು ಅದನ್ನ ಗಮನಿಸೋದಿಲ್ಲ ಅವಳ ಪ್ರೀತಿಯ ಬೆಲೆ ನಮಗೆ ಅರ್ಥ ಆಗಲ್ಲ

ನಾವು ಅವಳನ್ನ ಬಿಟ್ಟು ಬದುಕುವಾಗ ಅವಳು ತೋರಿಸುತ್ತಿದಂತ ಪ್ರೀತಿ ವಾತ್ಸಲ್ಯದ ಬಗ್ಗೆ ಅರಿವು ಆಗುತ್ತಾ ಹೋಗುತ್ತೆ. ಒಬ್ಬರೇ ಕೂತು ಊಟ ಮಾಡುವಾಗ ಕೈ ತುತ್ತಿನ ಬೆಲೆ ಗೊತ್ತಾಗುತ್ತೆ. ಅನಾರೋಗ್ಯಕ್ಕೆ ಬಿದ್ದು ರೂಂ ಅಲ್ಲಿ ಯಾರು ಸಹಾಯಕ್ಕೆ ಇಲ್ಲದಾಗ ನಮ್ಮ ಮುಂದೆನೆ ಕೂತು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದ ಅಮ್ಮ ತುಂಬಾನೆ ನೆನಪಾಗುತ್ತಾಳೆ. ಸುಸ್ತಾಗಿ ಬಂದಾಗ ಸೀರೆ ಸೆರಗಿಂದ ಹಣೆ ಹೊರಸಿ ಕಾಫಿ ಕೊಟ್ಟು ಏನಾಯಿತು ಅಂತ ಪ್ರೀತಿಯಿಂದ ಕೇಳುತಿದ್ದ ಅಮ್ಮನ ಮಾತುಗಳು ಕಿವಿಯಲ್ಲಿ ಝೇಂಕರಿಸುತ್ತವೆ. ಮಳೆಯಲ್ಲಿ ನೆನೆದು ಬಂದಾಗ ಬೈಯುತ್ತಾ ಬೈಯುತ್ತಾ ಬೈಗುಳದಲ್ಲೇ ಪ್ರೀತಿ ತೋರಿಸಿ ತಲೆ ಹೊರೆಸುವ ಕ್ಷಣಗಳು ನೆನಪಾಗಿ ಕಣ್ಣಲ್ಲಿ ನೀರು ತರಿಸುತ್ತವೆ ಅಲ್ವಾ..?

ಜೀವನದಲ್ಲಿ ಏರು ಪೇರು ಇಲ್ಲದೆ ಸದಾ ಅಮ್ಮನ ಜೊತೆ ಇರುವಾಗ ಅಮ್ಮನ ಪ್ರೀತಿ ಹೀಗೆ ಗೊತ್ತಗಲ್ವೋ ಅದೇ ತರ ತಾಯಿನಾಡಿನ ಬೆಲೆ ಕೂಡ ಗೊತ್ತಿರಲ್ಲ ನಾವು ನಮ್ಮೂರಲ್ಲಿ ಇರುವಾಗ ನಮ್ಮ ಊರಿನ ಬಗ್ಗೆ ಯೋಚನೆ ಕೂಡ ಮಾಡಲ್ಲ ಊರಲ್ಲಿ ಏನಿದೆ ಇಲ್ಲ ಅಂತ ತಿಳಿದುಕೊಳ್ಳುವಸ್ಟು ಕುತೂಹಲ ಕೂಡ ಇರಲ್ಲ ಅದೇ ಒಂದು ಸಾರಿ ಕಾಲು ತೆಗೆದು ಈಚೆ ಬಂದಾಗ ನಮ್ಮ ಊರಿನ ಬೆಲೆ ಗೊತ್ತಾಗುತ್ತೆ ಬೇರೆ ಊರಲ್ಲಿ ಇದ್ದು ಕಷ್ಟ ಪಡುವಾಗ ತಾಯಿ ಮತ್ತು ತಾಯಿನಾಡು ಗೋಮಾತೆ ತರ ಮುಂದೆ ಹೋದ್ರೆ ಹಾಯಲ್ಲ ಹಿಂದೆ ಹೋದ್ರೆ ಹೋದೆಯಲ್ಲ. ಎಲ್ಲಿ ಹೋದರು ಏನೇ ಮಾಡಿದರು ನಮ್ಮ safty  ನೋಡುತ್ತಾರೆ ಅಂತ ಗೊತ್ತಾಗುತ್ತೆ 

ನಾವು ನಮ್ಮ ಊರಲ್ಲಿ ಇರುವಾಗ ಪಕ್ಕದ ಮನೆಯವರನ್ನ ಶತ್ರು ತರ ನೋಡುತ್ತೇವೆ ಆದ್ರೆ ನಾವು ಬೇರೆ ಊರಲ್ಲಿ ಇರುವಾಗ ನಮ್ಮ ಊರಿನವರು ಸಿಕ್ಕಾಗ ಎಷ್ಟು ಪ್ರೀತಿ ತೋರಿಸುತ್ತೇವೆ, ಎಷ್ಟು ದೂರ ಇದ್ರೂ ಹುಡಿಕಿಕೊಂಡು ಹೋಗಿ ಮಾತನಾಡಿಸುತ್ತೇವೆ ಯಾರಾದ್ರೂ ನಮ್ಮ ಊರಿನವರಿಗೆ ಕೆಣಕಿದರೆ ನಮಗೆ ಕೆಣಕಿದಸ್ಟು  ಕೋಪ ಮಾಡಿಕೊಂಡು ಜಗಳಕ್ಕೆ ಹೋಗುತ್ತೇವೆ, ಅದೇ ರೀತಿ ನಮ್ಮ ನಾಡಿನ ಬಗ್ಗೆ ಯಾರಾದ್ರು ಏನಾದ್ರು ಅಂದ್ರೆ ಹಲ್ಲು ಉದುರಿಸಬೇಕು ಅನ್ನೋವಸ್ಟು ಕೋಪ ಬರುತ್ತೆ ಅಲ್ವಾ..  ನಮ್ಮನ್ನ ಏನಾದ್ರು ಅಂದ್ರು ಸಹ ಪರವಾಗಿಲ್ಲ ಆದರೆ ತಾಯಿನಾಡಿನ ಬಗ್ಗೆ ಏನಾದ್ರು ಅಂದ್ರೆ ಎಲ್ಲಿಲ್ಲದ ಕೋಪ ಬರುತ್ತೆ ಇದೆಲ್ಲದಕ್ಕೂ ಕಾರಣ ಅವಳು ತೋರಿದ ಪ್ರೀತಿ ನೆ ಅಲ್ವಾ ..

ತಾಯಿನಾಡು ಬಿಟ್ಟು ದೂರ ಇರುವಾಗ ನಮ್ಮ ಊರಿಗೆ ಯಾವಾಗ ವಾಪಸ್ಸು ಹೋಗುತ್ತೇವೋ ಯಾವಾಗ ಅಮ್ಮನ ಮುಖ ನೋಡುತ್ತಿವೋ ಅಂತ ಮನಸು ಹಾತೊರಿತ ಇರುತ್ತೆ ಹೇಗೋ ದಿನ ಗೊತ್ತು ಮಾಡಿಕೊಂಡಾಗ ಮನಸಲ್ಲಿ ಹೊಸದೊಂದು ಚಿಟ್ಟೆ ಹುಟ್ಟುತ್ತೆ. ಬಸ್ ಅಥವಾ ರೈಲು ಬುಕ್ ಮಾಡಿದಾಗ ಅಂತು ಚಿಟ್ಟೆ ರೆಕ್ಕೆ ಬಿಚ್ಚಿ ಹಾರೋಕೆ ಶುರು ಮಾಡೇ ಬಿಡುತ್ತೆಕ್ಯಾಲೆಂಡರ್ ಮುಖ ನೋಡಿ ಎಷ್ಟು ದಿನ ಆಗಿರುತ್ತೋ ಏನೋ ಆದ್ರೆ ರೈಲು ಬುಕ್ ಮಾಡಿದ ದಿನದಿಂದ ತಪ್ಪದೆ ಕ್ಯಾಲೆಂಡರ್ ನೋಡಿ ದಿನಗಳನ್ನ ಎಣಿಸೋಕೆ ಶುರು ಮಾಡುತ್ತೆ ಚಿಟ್ಟೆ. ದಿನಾ ರಾತ್ರಿ ಮಲಗುವಾಗ ಅಂತು ಮನೆಗೆ ಏನು ತಗೋಬೇಕು, ಏನು ಪ್ಯಾಕ್ ಮಾಡಿದಿನಿ ಇನ್ನು ಏನೇನು ಪ್ಯಾಕ್ ಮಾಡ್ಕೊಬೇಕು, ಊರಿಗೆ ಹೋದಮೇಲೆ ಏನು ಮಾಡಬೇಕು, ಅಮ್ಮನ ಹತ್ತಿರ ಏನು ಅಡಿಗೆ ಮಾಡಿಸಬೇಕು, ಏನು ತಿಂಡಿ ಮಾಡಿಸ್ಕೊಂಡು ತಿನ್ನಬೇಕು ಅಂತ ಯೋಚನೆ ಮಾಡೋಕೆ ಶುರು ಮಾಡುತ್ತೆ ಪುಟಾಣಿ ಚಿಟ್ಟೆ.

ಊರಿಗೆ ಹೋಗೋ ದಿನ ಹತ್ತಿರ ಬಂದ ಹಾಗೆ ಊರಿನ ಸೆಳೆತ ಜಾಸ್ತಿ ಆಗುತ್ತ ಹೋಗುತ್ತೆ. ಊರಿಗೆ ಹೊರಡೋ ದಿನ ಅಂತು ಹೆಣ್ಣು ಮಗಳು ಗಂಡನ ಮನೆ ಇಂದ ಅಮ್ಮನ ಮನೆಗೆ ಹೊರಡುವಾಗ ಎಷ್ಟು ಸಂಭ್ರಮಿಸುತ್ತಳೋ ಅದೇ ಸಂಬ್ರಮ ಮುಖದಲ್ಲಿ ಕಾಣುತ್ತಿರುತ್ತೆ. ಊಟನೆ ಬೇಡ ಅನಿಸುತ್ತೆ ಬಿಡು ಮನೆಗೆ ಹೋದಮೇಲೆ ತಿನ್ನಣ ಅನಿಸುತ್ತೆ. ರೈಲಿನಲ್ಲಿ ಕಣ್ಣು ಮುಚ್ಚಿದರು ನಿದ್ದೆ ಬರಲ್ಲ, ಬುಕ್ ತೆಗೆದರು  ಓದೋದಿಕ್ಕೆ ಆಗಲ್ಲ ಯಾವಾಗ ಊರು ತಲುಪುತ್ತೇವೋ ಅಂತ ಒಂದು ಗಳಿಗೆಗೆ ಒಂದು ಸಾರಿ watch ನೋಡ್ಕೊತಿವಿ, ಪ್ರತಿ ಸ್ಟಾಪ್ ಬಂದಾಗಲು ನಮ್ಮ ಊರಿಗೆ ಇನ್ನು ಎಷ್ಟು ಸ್ಟಾಪ್ ಬಾಕಿ ಇದೆ ಅಂತ ಲೆಕ್ಕಾಚಾರ ಮಾಡ್ತ್ತೇವೆ.


ರೈಲು ಇನ್ನೇನು ನಮ್ಮ ಊರಿನ ಗಡಿ ತಲುಪಿದಾಗ ಏನೋ ಒಂದುತರ ಮನಸಲ್ಲಿ ಸಮಾಧಾನ ಆಗುತ್ತೆ. ಗಾಳಿ ಸೋಕಿದಾಗ ಒಂದು ಕ್ಷಣ ನಮ್ಮನ್ನ ನಾವು ಮರೆತು ಬಿಡುತ್ತೇವೆ. ಅಬ್ಭಾ.. ಅಂತು ಇಂತೂ ನಮ್ಮ ಊರಿಗೆ ಬಂದು ಬಿಟ್ಟೆವಲ್ಲ ಅಂತ ಅನಿಸುತ್ತೆ . ಆಗ ಕೆಳಗಿನ ಸಾಲುಗಳು ಮನಸಲ್ಲಿ ಹೋಡಾಡುತ್ತದೆ
 
 ನಾ ಎಲ್ಲಿದ್ದರೇನು ಹೇಗಿದ್ದರೇನು

ನಾ ನಿನ್ನ ಕಂದನಮ್ಮ

ನಾ ಏನು ತಿಂದರೇನು ಏನು ಉಂಡರೇನು

ನಿನ್ನ ಒಂದು ಕೈ ತುತ್ತಿಗಾಗಿ ಕಾಯುತಿರುವೆನಮ್ಮ ಏನ ಕಲಿತರೇನು ಎಲ್ಲಿ ಕಲಿತರೇನು

ನಿನ್ನ ಪಾಠಕ್ಕೆ ಸರಿ ಸಾಟಿ ಇಲ್ಲಮ್ಮ

ಏನ ಗಳಿಸಿದರೇನು ಏನ ಪಡೆದರೇನು

ನಿನ್ನ ಅಪ್ಪುಗೆಯ ಕಳೆದುಕೊಂಡೆನಮ್ಮನಿನ್ನನೊಮ್ಮೆ ನೋಡಲು ಕಣ್ಣು ಕಾದಿವೆ

ನಿನ್ನ ನುಡಿಯ ಕೇಳಲು ಕಿವಿಗಳು ಆಲಿಸುತ್ತಿವೆ

ನಿನ್ನ ಪ್ರೀತಿಯ ಅಪ್ಪುಗೆಗೆ ಕೈಗಳೆರಡು ಚಾಚಿವೆ

ಮರಳಿ ಗೂಡಿಗೆ ಸೇರಲು ಮನಸು ಹಾತೊರೆಯುತಿದೆ

ಮನೆ ಒಳಗಡೆ ಕಾಲು ಇಟ್ಟಾಗ ಕಳೆದುಕೊಂಡಿದ್ದನ್ನ ಮತ್ತೆ ಪಡೆದು ಕೊಂಡಾಗ ಆಗುವಂತ ಸಮಾಧಾನ ಆಗುತ್ತೆ. ತಾಯಿ ಮುಖ ನೋಡಿದಾಗ ಹೊಟ್ಟೆಯಲ್ಲಿ ಸಾವಿರ ಚಿಟ್ಟೆಗಳು ಒಂದೇ ಸಾರಿ ರೆಕ್ಕೆಬಿಚ್ಚಿ ಹಾರಿದಂತೆ ಆಗುತ್ತದೆ ಅಮ್ಮನ ಜೊತೆ ಕಾಲ ಕಳೆಯುವಾಗ ಟೈಮ್ ಹೋಗುವುದೇ ಗೊತ್ತಾಗುವುದಿಲ್ಲ ಮನಸಲ್ಲಿ ಬಚ್ಚಿಟ್ಟುಕೊಂಡ ಎಲ್ಲಾ ಮಾತುಗಳನ್ನ  ಹೇಳೋದಿಕ್ಕೆ ಸಮಯನೆ ಸಾಲೋದಿಲ್ಲ. ಮನಸೆಂಬ ಚಿಟ್ಟೆ ರೆಕ್ಕೆಬಿಚ್ಚಿ ಸ್ವತಂತ್ರವಾಗಿ ಎಲ್ಲೆಗಳಿಲ್ಲದೆ ಹಾರಾಡುವಾಗ ಒಂದು ದಿನ ವಾಪಸ್ಸು ಹೋಗಬೇಕಾದ ಟೈಮ್ ಬರುತ್ತೆ ಆಗ ಚಿಟ್ಟೆಗೆ ಎರಡು ರೆಕ್ಕೆಗಳನ್ನ ಕಡಿದು ಹಾಕಿದಂತೆ ಆಗುತ್ತದೆ. ಹಾರುವುದಕ್ಕೂ  ಆಗದೆ ನೋವನ್ನ ಬೇರೆಯವರಿಗೆ ಹೇಳಿಕೊಳ್ಳುವುದಕ್ಕು ಆಗದೆ ಮಂಕಾಗಿ ಬಿಡುತ್ತದೆ. ಒಲ್ಲದ ಮನಸ್ಸಿನಿಂದಲೇ ರೈಲು ಸ್ಟೇಷನ್ ಗೆ, ಅಮ್ಮನ ಮನೆಯಿಂದ ಗಂಡನ ಮನೆಗೆ ಹೋಗುವ ಹೆಣ್ಣುಮಗಳಂತೆ ಮುಖ ಇಳಿಬಿಟ್ಟುಕೊಂಡು ಕಣ್ಣಲ್ಲಿ ನೀರು ತುಂಬಿಸಿಕೊಂಡು ರೈಲಿನಲ್ಲಿ ಕುಳಿತುಕೊಳ್ಳುತ್ತದೆ ಕೊನೆಗೆ ನಮ್ಮ ಗಡಿ ಬಿಟ್ಟು ಹೋಗುವವರೆಗಾದರು ನಮ್ಮ ಹಾಡನ್ನು ಕೇಳೋಣ ಎಂದು FM  ಹಾಕಿಕೊಂಡು ತಾಯಿ ಮತ್ತು ತಾಯಿನಾಡನ್ನ ಮಿಸ್ ಮಾಡಿಕೊಂಡು ವಾಪಸ್ಸಗುತ್ತದೆ.
                                             
                                                                     
                                                     ಇಂತಿ
                                                               ಕವಿತಾ ಗೌಡ