Sunday, March 3, 2013

3/3/2013 ರ ಪ್ರಜಾ ಪ್ರಗತಿ ದಿನಪತ್ರಿಕೆಯಲ್ಲಿ ನನ್ನಕವನ "ಬರಗಾಲದ ತಾಂಡವ"



ಬರಗಾಲದ ತಾಂಡವ


ಬರಗಾಲ ಬಂದಿಹುದು
ಕೆರೆ ಬತ್ತಿ ಬರಿದಾಗಿಹುದು
ಹೊಲ ಒಣಗಿ ಬಿರಿಯುತಿಹುದು
ಭೂಮಿ ಕಾದು ಸುಡುತಿಹುದು 

ಮನೆಯಲ್ಲಿ ಕಾಳಿಲ್ಲ
ಕೈಯಲ್ಲಿ ಕಾಸಿಲ್ಲ
ದನಕರುಗೆ ಮೇವಿಲ್ಲ
ಊರಲ್ಲಿ ಕಳೆ ಇಲ್ಲ

ಪ್ರತಿನಿತ್ಯ ಉಪವಾಸ
ನೀರಿಗೂ ಪರದಾಟ
ಪ್ರಾಣಿಗಳ ಚೀರಾಟ
ನರರ ನರಳಾಟ 

ನೂರಾರು ಬೇನೆಗಳು
ಸಾಲು ಸಾಲು ಸಾವುಗಳು
ಮುಗಿಲು ನೋಡೊ ಕಣ್ಣುಗಳು
ಅಸಹಾಯಕ ಮುಖಗಳು 

ಊರು ಊರಾಗಿಲ್ಲ ಸ್ಮಶಾನವಾಗಿಹುದು
ಎಲ್ಲೆಲ್ಲು ಸೂತಕದ ಛಾಯೆ ಆವರಿಸಿಹುದು
ದೇಹ ಬೆಂಡಾಗಿಹುದು
ಮನಸು ಬೆಂದೋಗಿಹುದು
 

ಮಳೆರಾಯ ಕರುಣೆಯಿಟ್ಟು
ನನ್ನೂರಿಗೆ ಬಾ ಇಂದು
ಸೂತಕವ ಕಳೆದು ತುಂಬು ಹೊಸ ಜೀವಕಳೆಯನ್ನು
ಕೊಡು ಎಲ್ಲರಲಿ ಚೈತನ್ಯವನ್ನು

        ಇಂತಿ,
                 ಕವಿತಾ ಗೌಡ