Tuesday, November 29, 2016

ಅಮ್ಮ

ದಿನಗಳ  ದಾರದಿ
ಬುದ್ದಿವಂತಿಕೆ ಸೂಜಿಯಿಂದ
ಹರಿದ ಭವಿಷ್ಯವ
ಹೊಲಿಯುತ್ತಿದ್ದಾಳೆ ಅಮ್ಮ

ಮನದ ಕಣಕೆ
ಬೇಲಿ ಕಟ್ಟಿ
ಆತ್ಮವಿಶ್ವಾಸದ
ಸಗಣಿ ಸಾರಿಸಿ
ಹೆಣೆಯುತ್ತಿದ್ದಾಳೆ ಅಮ್ಮ
ನನ್ನ ಹಸನಾದ ನಾಳೆಗಳ

                           --ಕವಿತಾ ಗೋಪಿಕುಂಟೆ 

Friday, November 25, 2016

ಜಾಗತೀಕರಣದ ಕರಿನೆರಳು

ಜಾಗತೀಕರಣದ ಜಾಗಟೆ 
ಸದ್ದು ಎಲ್ಲೆಲ್ಲೂ ಹರಡಿದೆ 
ಬಹುರಾಷ್ಟ್ರೀಯ ಕಂಪನಿಗಳು 
ಕಾಳ್ಗೀಚಿನಂತೆ ಹಬ್ಬುತ್ತಿವೆ 

ಕೃಷಿ ಮರೆತು ಜಾಣರೆಲ್ಲ 
ವಲಸೆ ಬಂದಾಗಿದೆ 
ನಗರೀಕರಣ ಸುನಾಮಿಯಂತೆ 
ಆವರಿಸುತ್ತಿದೆ 

ಏರುತಿದೆ  ಜನಸಂಖ್ಯೆ 
ಹಾಕುವವರಿಲ್ಲ ಅಂಕೆ 
ಕಾಡೆಲ್ಲ ರೋಡಾಗಿ ಕೃಷಿಭೂಮಿ 
ಕಾಂಕ್ರೀಟು ಕಾಡಾಗಿದೆ 

ಬಿಳಿ ಭಾಷೆ ಸೆರಗಿಡಿದು 
ತಾಯಿನುಡಿಯ ನಿರ್ಲಕ್ಷಿಸಿ 
ತಮ್ಮತನವ ಮರೆಸಿ ಪಾಶ್ಚ್ಯಾತ್ಯ  
ಸಂಸ್ಕೃತಿಯ ಮೆರೆಸುತಿದೆ 

ವಿದೇಶಿಗರೇ ದೇವರಾಗಿ 
ವಿದೇಶಿಬಂಡವಾಳವೇ ನಾಡಿಯಾಗಿ 
ಲಾಭ ನಷ್ಟಗಳೆ ಮಿಡಿತಗಳಾಗಿ 
ಮನುಷ್ಯತ್ವವನು ಮರೆಯಾಗಿಸಿದೆ 

ಸಂಬಂಧಗಳಿಗೆ ಬೆಲೆಕಟ್ಟಿ 
ಹೆತ್ತವರನ್ನು ದೂರ ಸರಿಸಿ 
ವೃದ್ದಾಶ್ರಮಗಳನು ಸೃಷ್ಟಿಸಿ 
ಅನಾಥರಂತೆ ಬದುಕಿಸುತಿದೆ 

ಜಾಗರೂಕ ಮನಗಳಲ್ಲಿ 
ತಲ್ಲಣವ ಸೃಷ್ಟಿಸಿ 
ಜಾಗತಿಕ ಕರಿನೆರಳು 
ಕೇಕೆಹಾಕಿ ನಗುತಲಿದೆ 

                          --ಕವಿತಾ ಗೋಪಿಕುಂಟೆ 

ಕವಿಗೋಷ್ಠಿ

ವಯೋಬೇಧವಿಲ್ಲದೆ 
ಕವಿಗಳೆನಿಸಿಕೊಂಡವರ 
ಒಂದೆಡೆ ಸೇರಿಸುವುದು ಕವಿಗೋಷ್ಠಿ 

ಕವಿತೆರೂಪದಲಿ ತಂದ 
ಕಲ್ಪನೆ ಅನುಭವಗಳ ಬಂಡಾರವ 
ಜಗತ್ತಿಗೆ ಸಾರುವ ವೇದಿಕೆ ಕವಿಗೋಷ್ಠಿ 

ತಪ್ಪು ಒಪ್ಪುಗಳ ಅರಿತು 
ಹಿರಿಯರ ಮಾರ್ಗದರ್ಶನ ಪಡೆದು 
ಬರೆವ ಹಂಬಲ ತರುವ ಶಕ್ತಿ ಕವಿಗೋಷ್ಠಿ 


                                --ಕವಿತಾ ಗೋಪಿಕುಂಟೆ 

ನೋವರುಚಿ

ಕಣ್ಣೀರ ಉಪ್ಪಾಕಿ
ಎದೆಯುರಿಯ
ಖಾರವಾಕಿ
ಬೇಯಿಸಿದರೂ
ರುಚಿಸುವುದಿಲ್ಲ ನೋವು

                  --ಕವಿತಾ ಗೋಪಿಕುಂಟೆ