Friday, January 29, 2016

ರಾಜಕೀಯ ಕವಿತೆ

ಮಂದಿರ ಮಸೀದಿಗಳಲಿ
ಚರ್ಚ್ ಬಸದಿಗಳಲಿ
ಹುಟ್ಟುತ್ತಿತ್ತು
ಜಾತಿಮತ ಪಂತವಿಲ್ಲದ
ಬಡವಬಲ್ಲಿದನೆಂಬ
ಭೇದವಿಲ್ಲದ ನನ್ನ ಕವಿತೆ

ಮನಶಾಂತಿಗಾಗಿ
ಸಮಾಜದ ಒಳಿತಿಗಾಗಿ
ಸಾರುತ್ತಿತ್ತು
ಒಗ್ಗಟ್ಟಿನಲ್ಲಿ ಬಲವಿದೆಯೆಂದು
ಎಲ್ಲರಿಗು ಸುಖವಿದೆಯೆಂದು

ಸ್ವಾರ್ಥ ರಾಜಕೀಯದಲ್ಲಿ  
ಅಧಿಕಾರದ ದುರಾಸೆಯಲ್ಲಿ
ಹುಟ್ಟುತಿಹುದು 
ಧರ್ಮಜಾತಿ ಪಟ್ಟಿ ಹೊತ್ತು
ಸಮಾಜ ಹೊಡೆದು
ಉರುಳಿಸಲು ನನ್ನ ಕವಿತೆ

ಜನರ ಓಟಿಗಾಗಿ
ಅಧಿಕಾರದ ಸೀಟಿಗಾಗಿ
ತೋರುತಿಹುದು
ಹೊಡೆಯುವುದರಲಿ ಜಾಣ್ಮೆಯಿದೆಯೆಂದು
ಇದರಲಿ ಸ್ವಾರ್ಥಸುಖವಿದೆಯೆಂದು

ಹೊಡೆದ ಇಭ್ಬಾಗದಲಿ
ಐಕ್ಯತೆ ಸಾರುವ ದೊಂಬರಾಟದಲಿ  
ಬಿತ್ತುತಿದೆ  ದ್ವೇಷಬೀಜ
ಮೊಳೆದು ಗಿಡವಾಗಿ
ಹೆಮ್ಮರವಾದಾಗ ಜಾಣಮೌನ
ವಹಿಸುವುದು ನನ್ನ ಕವಿತೆ

ಧ್ವೇಷ ಕಿಡಿ ಜ್ವಾಲೆಯಲ್ಲಿ
ತನ್ನ ಬೇಳೆ ಬೇಯಿಸಿ 
ತೋರುವುದು
ಯುವಭವಿಷ್ಯ ಕಮರಿಸುವುದೇಗೆಂದು 
ತನ್ನ ನಾಳೆಗಳ ಹಸನಾಗಿಸುವುದೇಗೆಂದು

ಇಂತಿ,
ಕವಿತಾ ಗೋಪಿಕುಂಟೆ

Thursday, January 28, 2016

ಅವನಲ್ಲದ ಅವಳು

"ನಾನು ಅವನಲ್ಲ ಅವಳು" ಸಿನಿಮಾದ  ಬಗ್ಗೆ ತುಂಬಾ ಕೇಳಿದೆ. ಇದೇ ಸಿನಿಮಾ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿಯನ್ನೂ, ನಾಗರಾಜ್ ರವರಿಗೆ ಮೇಕಪ್ಪಿಗೆ ರಾಷ್ಟ್ರಪ್ರಶಸ್ತಿಯನ್ನೂ ತಂದು ಕೊಟ್ಟಿತು.ಸ್ನೇಹಿತರೆಲ್ಲಾ ಸಿನಿಮಾ ನೋಡಿದರು ಚೆನ್ನಾಗಿದೆ ಅಂತ ಹೇಳಿದರು ಅದರೂ ನಾ ನೋಡಲಾಗಲಿಲ್ಲ. ಇವತ್ತು ಹೀಗೆ ಸುಮ್ಮನೆ ನೋಡಿದೆ ಮನ ಕಲಕಿಬಿಟ್ಟಿತು ನನ್ನ ಒಳಗೆ  ಒಂದುತೆರೆನಾದ ಬೆಂಕಿಯಂತ ಭಾವನೆ ಹುಟ್ಟಿಬಿಟ್ಟಿತು .ಅದು ಅವರ ಬಗ್ಗೆ ಕನಿಕರವೋ ಅಥವಾ ಕಾಳಜಿಯೋ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯೋ ತಿಳಿಯುತ್ತಿಲ್ಲ. ಆದರೆ ಅವರ ಆಸೆ, ಭಾವನೆ ,ತಳಮಳ, ಅವರ ಭವಿಷ್ಯದ ಬಗೆಗಿನ ಕಳವಳವನ್ನ ನನ್ನದೇ ಕವನದಲ್ಲಿ ಹೊರಹಾಕಿದ್ದೇನೆ. ದಯವಿಟ್ಟು ಓದಿ ಪ್ರತಿಕ್ರಯಿಸಿ 

ಎಡ ಉಂಟು ಬಲ ಉಂಟು
ಯಾವುದೀ ಮಧ್ಯವು
ಅವನುಂಟು ಅವಳುಂಟು
ಏನಿದೀ ದ್ವಂದ್ವವು

ದೇಹ ಅವನು
ಆತ್ಮ ಅವಳು
ಎನಿತು ಈ
ಮಧ್ಯ ಭಾವವು

ನಾ ಅವನಲ್ಲ ಅವಳೆಂದಾಕ್ಷಣ
ಮಗನಾಗಿ ಕಂಡ ಅಪ್ಪ
ಸಮಾಜಕೆದರಿ
ಮನೆ ಬಿಟ್ಟೋಡಿಸುವನು

ಕೈಚೆಲ್ಲಿ ಅಮ್ಮ
ಅಪ್ಪನಿಗೆದರಿ 
ಅರೆಮನಸಲಿ ಹೊರದೂಡುವಳು

ಕಗ್ಗತ್ತಲ ಜಗದಲ್ಲಿ
ಹೋಗುವುದಾದರು ಎಲ್ಲಿಗೆ
ಕಗ್ಗಲ್ಲಿನ ಜನರ ನಡುವೆ
ಮುನ್ನುಗ್ಗಿ ನಿಲ್ಲುವುದಾದರು ಹೇಗೆ

ಅವಳಾಗುವಾಸೆ ತುಳಿದಿಟ್ಟು
ಅವನೆಂಬ ಮುಖವಾಡ
ಹೇಗೆ ಹೊತ್ತು ನಡೆಯಲಿ

ಕತ್ತಲೆ ಕೋಣೆಯಲಿ
ಆಗಾಗ ಅವಳಾಗಿ
ಇನ್ನೆಷ್ಟು ದಿನ ಮೆರೆಯಲಿ

ಡೋಲಾಯ ಮನಸಿಟ್ಟು
ಬೇಡದ ಜೀವನದಿ
ಹೇಗೆ ನಾ ಬಾಳಲಿ

                                                    ಇಂತಿ,
                                                    ಕವಿತಾ ಗೋಪಿಕುಂಟೆ

Friday, January 22, 2016

ಪ್ರೀತಿ ಅಪಾರ

ಜ್ಞಾನ ತುಂಬಾ ಭಾರ
ಸಾಧನೆ ಬಲು ಕಠೋರ
ಆದರೆ
ಅದರ ಪ್ರೀತಿ ಅಪಾರ
ತುಂಬಿಡುವ ಬಾರಾ

ತುಂಬಿದೊಷ್ಟು
ಹೆಚ್ಚಾಗಲಿ ದಾಹ
ಎಂದೂ
ಬತ್ತದಿರಲಿ ಮೋಹ

                                      ಇಂತಿ,
                                      ಕವಿತಾ ಗೋಪಿಕುಂಟೆ

ಅಳಿವಿನಂಚಿನ ಗುಬ್ಬಚ್ಚಿ

ಹುಟ್ಟಿ ಮುಳುಗುವ ಸೂರ್ಯ
ಹೊಟ್ಟೆ ಹಸಿದ ಸದ್ದು
ಆಗೊಮ್ಮೆ ಈಗೊಮ್ಮೆ
ಬರ್ರೆಂದು ಬರುವ
ಬಸ್ಸುಗಳಾಗಿದ್ದವು
ನಮ್ಮಪ್ಪನ ಗಡಿಯಾರಗಳು

ಹೊಲ ಮೀಟುವ
ನೇಗಿಲ ಸದ್ದು
ಎತ್ತಿನ ಕೊರಳಿನ
ಘಂಟೆಯ ನಾದ
ಗುಬ್ಬಚ್ಚಿ ಪಿಳಿಕಾರದ
ಟಿವ್ ಟಿವ್
ಮಾತುಗಳಾಗಿದ್ದವು
ಸಂಗೀತ ಕಛೇರಿಗಳು

ಇದ ಆಸ್ವಾದಿಸಿ
ಅನಂದಿಸುವಪ್ಪನಿಗೆ
ತಂದುಕೊಟ್ಟೆವು
ಮಾಯಬಜಾರಿನ
ಮೊಬೈಲನು
ತೂಗಾಕಿದೆವವನ
ಕೊರಳಿಗದನು

ಮರೆತೇ ಬಿಟ್ಟನು ಅಪ್ಪ
ಎಲ್ಲವನು
ಮೆಚ್ಚಿದನು ಮೊಬೈಲಿನ
ಚಮತ್ಕಾರವನು

ಕಳೆದವು ಮಾಸ
ವರುಷಗಳು
ಬೇಸರ ತರಿಸಿದವು
ಮೊಬೈಲುಗಳು

ಹಿಂತಿರುಗಿ ನೋಡುವ
ಆಸೆಯು ಬಂದಿತು
ಅಪ್ಪನಿಗೆ
ಎಲ್ಲವು ಮೊದಲಾಗೆ
ಕಂಡವವನಿಗೆ
ಆದರೆ
ಮೊಬೈಲಿನ
ಮಾಯಾಜಾಲಕೆ ಸಿಕ್ಕಿ
ಗೂಡು ಬಿಟ್ಟು
ಮಾಯವಾದವು
ಗುಬ್ಬಿಗಳು

ಎಲ್ಲುಡುಕಿದರು ಕಾಣದೆ
ಅಳಿವಿನಂಚಿಗೆ ಬಂದು ನಿಂತವು
ನಮ್ಮ ಗುಬ್ಬಚ್ಚಿಗಳು
ಈಗಲಾದರೂ ಅರಿಯದೆ ಹೋದರೆ
ಸೇರುವವು ಗತ ಇತಿಹಾಸವನು

                                                   ಇಂತಿ,
                                                   ಕವಿತಾ ಗೋಪಿಕುಂಟೆ

Thursday, January 21, 2016

ಕಲ್ಮಶ - ನಿಷ್ಕಲ್ಮಶ

ನೀರು, ಸತ್ಯ, ಮನಸ್ಸು
ನಿಷ್ಕಲ್ಮಶ

ನೀರಿಗೆ ಬಣ್ಣ
ಸತ್ಯಕ್ಕೆ ಸುಳ್ಳು
ಮನಸ್ಸಿಗೆ ಅಸೂಯೆ
ಬೆರೆತಾಗ
ಎಲ್ಲವೂ ಕಲ್ಮಶ

ಕಲ್ಮಶಕ್ಕೆ ಆಯಸ್ಸಿಲ್ಲ
ನಿಷ್ಕಲ್ಮಶ ಅಜರಾಮರ

                                          ಇಂತಿ,
                                          ಕವಿತಾ ಗೋಪಿಕುಂಟೆ

Tuesday, January 19, 2016

ಮೆಚ್ಚಿ ಹಚ್ಚಾಗುವ ಕವಿತೆ

ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾದ ವಸುಧೇಂದ್ರ ಸರ್ ರವರ, ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂದರ್ಶನದಲ್ಲಿದ್ದ ""ಬರವಣಿಗೆ ನನಗೆ ದೇವರು ನೀಡಿರುವ ಕೌಶಲ. ಬರೆಯದೆ ಹೋದರೆ ನನಗೆ ದೊರೆತ ವರವನ್ನು ಅವಮಾನಿಸಿದಂತೆ."" ಅನ್ನುವ ಸಾಲಿನಿಂದ ಪ್ರೇರೇಪಿತಗೊಂಡು ಈ ಕೆಳಗಿನ ಕವಿತೆಯನ್ನು ಬರೆದಿದ್ದೇನೆ.
ಅವರ ಮಾತಿನಂತೆ ದೇವರು ನನಗೆ ನೀಡಿರುವ ವರವನ್ನು ಅವಮಾನಿಸದಂತೆ ಉಳಿಸಿಕೊಳ್ಳುವೆ.
ಬಿಡುವಿನ ವೇಳೆಯಲ್ಲಿ ಬರೆಯದೆ, ಬರೆಯುವುದಕ್ಕೊಸ್ಕರ ಬಿಡುವು ಮಾಡಿಕೊಂಡು ಬರೆದು ದೇವರು ಕೊಟ್ಟ ವರವನ್ನ ಮತ್ತಷ್ಟು ಗೌರವಿಸಬೇಕೆಂದಿದ್ದೇನೆ.

ಮೊದಲೆಲ್ಲ ಹುಡುಕುತ್ತಿದ್ದೆ
ನನ್ನೊಳಗಿಹ ಕವಿತೆ
ಆದರೀಗ ಹುಡುಕುತಿಹೆನು
ನನ್ನೊಳಗಿನ ಕವಿತ 


ಜಂಜಾಟದಿ ಮುಳುಗಿ
ದೇವರ ವರವ ಮರೆತು
ಶೂನ್ಯದೆಡೆ ನಡೆವಾಗ
ಮುತ್ತೊಂದ ಕಂಡು
ತಪ್ಪಿನರಿವಾಗಿ
ನನ್ನೊಳಗೆ ಹುಡುಕುತಿಹೆನು

ದುಗುಡ ದುಮ್ಮಾನಗಳ
ಹೆಕ್ಕಿತೆಗೆದು
ಅರೆಬೆಂದ ಕವಿತೆಗಳ
ಕಾಯಿಸಿ ಹಚ್ಚಾಗಿಸಲು
ಹುಡುಕುತಿಹೆನು

ಸಿಕ್ಕಾಳೆ ಆ
ನನ್ನ ಕವಿತ
ಹುಡುಕುವಳೆ
ಮೆಚ್ಚಿ ಹಚ್ಚಾಗುವ
ಕವಿತೆಗಳ

                                                             ಇಂತಿ,
                                                             ಕವಿತಾ ಗೋಪಿಕುಂಟೆ