Thursday, January 28, 2016

ಅವನಲ್ಲದ ಅವಳು

"ನಾನು ಅವನಲ್ಲ ಅವಳು" ಸಿನಿಮಾದ  ಬಗ್ಗೆ ತುಂಬಾ ಕೇಳಿದೆ. ಇದೇ ಸಿನಿಮಾ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿಯನ್ನೂ, ನಾಗರಾಜ್ ರವರಿಗೆ ಮೇಕಪ್ಪಿಗೆ ರಾಷ್ಟ್ರಪ್ರಶಸ್ತಿಯನ್ನೂ ತಂದು ಕೊಟ್ಟಿತು.ಸ್ನೇಹಿತರೆಲ್ಲಾ ಸಿನಿಮಾ ನೋಡಿದರು ಚೆನ್ನಾಗಿದೆ ಅಂತ ಹೇಳಿದರು ಅದರೂ ನಾ ನೋಡಲಾಗಲಿಲ್ಲ. ಇವತ್ತು ಹೀಗೆ ಸುಮ್ಮನೆ ನೋಡಿದೆ ಮನ ಕಲಕಿಬಿಟ್ಟಿತು ನನ್ನ ಒಳಗೆ  ಒಂದುತೆರೆನಾದ ಬೆಂಕಿಯಂತ ಭಾವನೆ ಹುಟ್ಟಿಬಿಟ್ಟಿತು .ಅದು ಅವರ ಬಗ್ಗೆ ಕನಿಕರವೋ ಅಥವಾ ಕಾಳಜಿಯೋ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯೋ ತಿಳಿಯುತ್ತಿಲ್ಲ. ಆದರೆ ಅವರ ಆಸೆ, ಭಾವನೆ ,ತಳಮಳ, ಅವರ ಭವಿಷ್ಯದ ಬಗೆಗಿನ ಕಳವಳವನ್ನ ನನ್ನದೇ ಕವನದಲ್ಲಿ ಹೊರಹಾಕಿದ್ದೇನೆ. ದಯವಿಟ್ಟು ಓದಿ ಪ್ರತಿಕ್ರಯಿಸಿ 

ಎಡ ಉಂಟು ಬಲ ಉಂಟು
ಯಾವುದೀ ಮಧ್ಯವು
ಅವನುಂಟು ಅವಳುಂಟು
ಏನಿದೀ ದ್ವಂದ್ವವು

ದೇಹ ಅವನು
ಆತ್ಮ ಅವಳು
ಎನಿತು ಈ
ಮಧ್ಯ ಭಾವವು

ನಾ ಅವನಲ್ಲ ಅವಳೆಂದಾಕ್ಷಣ
ಮಗನಾಗಿ ಕಂಡ ಅಪ್ಪ
ಸಮಾಜಕೆದರಿ
ಮನೆ ಬಿಟ್ಟೋಡಿಸುವನು

ಕೈಚೆಲ್ಲಿ ಅಮ್ಮ
ಅಪ್ಪನಿಗೆದರಿ 
ಅರೆಮನಸಲಿ ಹೊರದೂಡುವಳು

ಕಗ್ಗತ್ತಲ ಜಗದಲ್ಲಿ
ಹೋಗುವುದಾದರು ಎಲ್ಲಿಗೆ
ಕಗ್ಗಲ್ಲಿನ ಜನರ ನಡುವೆ
ಮುನ್ನುಗ್ಗಿ ನಿಲ್ಲುವುದಾದರು ಹೇಗೆ

ಅವಳಾಗುವಾಸೆ ತುಳಿದಿಟ್ಟು
ಅವನೆಂಬ ಮುಖವಾಡ
ಹೇಗೆ ಹೊತ್ತು ನಡೆಯಲಿ

ಕತ್ತಲೆ ಕೋಣೆಯಲಿ
ಆಗಾಗ ಅವಳಾಗಿ
ಇನ್ನೆಷ್ಟು ದಿನ ಮೆರೆಯಲಿ

ಡೋಲಾಯ ಮನಸಿಟ್ಟು
ಬೇಡದ ಜೀವನದಿ
ಹೇಗೆ ನಾ ಬಾಳಲಿ

                                                    ಇಂತಿ,
                                                    ಕವಿತಾ ಗೋಪಿಕುಂಟೆ

No comments:

Post a Comment

Note: Only a member of this blog may post a comment.