Friday, December 18, 2015

ಕಾಲನ ತಟ

ಕಾಲನ ತಟದಲಿ
ಸರಸರನೆ ಬಂದೋಗುವ
ನಿಮಿಷಗಳಲೆಗಳ ನೋಡುತಿರೆ
ತನುಮನ ತಣಿವುದು
ಜಗದೊಳಿರುವ ಒಳ್ಳೆಯ ಮನುಜರ
ಕಂಡರೆ ಮನತುಂಬಿ ಬರುವುದು

ಬಡಿದಬ್ಬರಿಸುವ ಘನಘೋರಲೆಗೆ
ಎದೆ ಜಲ್ಲೆನ್ನುವುದು
ಕ್ರೂರಿಗಳಾರ್ಭಟಕೆ
ಭಯವಾವರಿಸುವುದು 

ತಣಿಸುವ ಅಲೆ
ಭಯವಾಗಿಸುವಲೆ
ಎರೆಡೂ ಅಲೆಯೇ

ಒಳ್ಳೆಯ ಆತ್ಮ
ಕೆಟ್ಟ ಆತ್ಮ
ಎರೆಡೂ ಆತ್ಮಗಳೇ

ಪರಮಾತ್ಮನ ಆಟದಿ ದಾಳಗಳಾಗಿ
ಬಂದಪ್ಪಳಿಸುವ ರೀತಿ ಮಾತ್ರವೆ ಬೇರೆ
ಬದುಕುವ ರೀತಿ ಮಾತ್ರವೆ ಬೇರೆ

                                                                    ಇಂತಿ,
                                                                    ಕವಿತಾ ಗೋಪಿಕುಂಟೆ

Wednesday, September 16, 2015

ನನ್ನಾಯ್ಕೆ

ನನ್ನಾಯ್ಕೆಯ ಜಗದಲ್ಲಿ
ನನಗಾಗಿಯ ನಿಯಮಗಳಿಲ್ಲ
ರೀತಿ ನೀತಿ ಹೆಸರಿನ
ಲಕ್ಷ್ಮಣ ರೇಖೆಯಿಲ್ಲ
ಸಂಕಷ್ಟಗಳ ಸುಳಿವಿಲ್ಲ
ಆದರೆ
ಕನಸುಗಳ ಕಲರವವಿಲ್ಲ
ಜೆಂಜಾಟದ ಝೇಂಕಾರವಿಲ್ಲ
ಛೇ
ಮರೆತೇಬಿಟ್ಟೆ ನಾ
ಆಯ್ಕೆಯ ವೇಳೆ 
ಜೆಂಜಾಟವಿಲ್ಲದೆಡೆ
ಕನಸುಗಳು
ಕಮರುವುವೆಂದು
ಹಸಿವಿಲ್ಲದೆಡೆ
ಶೋಧನಿಲ್ಲುವುದೆಂದು

                                                  ಇಂತಿ,
                                                  ಕವಿತಾ ಗೋಪಿಕುಂಟೆ

ಹುಡುಕಾಟ

ವಿಜ್ಞಾನಿಯೊಬ್ಬ ನವಗ್ರಹಗಳ
ಅಳೆದಳೆದು ಹುಡುಕುವನು
ಆಯಸ್ಸನು
ಜ್ಯೋತಿಷಿಯೊಬ್ಬ ಕೂಡುತ್ತ ಕಳೆಯುತ್ತ
ಗುಣಿಸುತ್ತ ಭಾಗಿಸಿ ಹುಡುಕುವನು
ಭವಿಷ್ಯವನು
ಕವಿಯೊಬ್ಬ ಹುಡುಕುವನು
ಪ್ರೀತಿ ಸೆಳೆತವನು
ಸಾಮಾನ್ಯನೊಬ್ಬ ಹುಡುಕುವನು
ದೇವರನು

ಇಲ್ಲಿ ಎಲ್ಲರು ಹುಡುಕುವುದೊಂದೇ
ಅದುವೇ ಜೀವನ
ಬದುಕಿನ ಪ್ರತಿ ಹಂತದ
ಹುಡುಕಾಟವೆ ಪ್ರೀತಿ
ಇದುವೇ ನಮ್ಮಯ
ಹುಡುಕುವ ರೀತಿ
                                                  ಇಂತಿ,
                                                  ಕವಿತಾ ಗೋಪಿಕುಂಟೆ

Tuesday, August 25, 2015

ಮೂಗುತಿ

ಮೂಗುತಿಯಿಲ್ಲದ ಹೆಂಡತಿ
ಕಿರೀಟವಿಲ್ಲದ ದೇವತೆ
ಮೀಸೆಯಿಲ್ಲದ ಗಂಡ
ಗೋಪುರವಿಲ್ಲದ ಗುಡಿ

ನನ್ನಾತ್ಮದ ಹುಳು

ಭುವಿಯಿಂದ ಹುಳು
ಹೊರಬರುವಂತೆ
ನನ್ನಾತ್ಮದ ಕಾವ್ಯ
ಹೊರಬರುವುದು

ಒಮ್ಮೊಮ್ಮೆ ತೆವಳಿ
ಮತ್ತೊಮ್ಮೆ ಪುಟಿದು
ಕೆಲವೊಮ್ಮೆ ಹಾರಿ
ಹೊರಬರುವುದು

ಹೊರಬರುವರೆಗೂ ನನ್ನ
ತಲೆ ಕೊರೆವುದು

                                          ಇಂತಿ,
                                          ಕವಿತಾ ಗೋಪಿಕುಂಟೆ 

Wednesday, August 19, 2015

ಮ್ಯಾನೇಜರ್

ಆಫೀಸ್ ನಲ್ಲಿ  ಮ್ಯಾನೇಜರ್
ಮುಂದೆ ಕೂತ್ಕೊಳೋದು,
ದನದ ಕೊಟ್ಟಿಗೆಯಲ್ಲಿ
ಕೂತ್ಕೊಳೋದು
ಎರೆಡು ಒಂದೇ
ಯಾವ ಕಡೆ ಕೊಸರುದ್ರು
ಒದಿಯೋದೇ,
ಏನು ಮಾಡುದ್ರು
ಗುಮ್ಮೊದೇ

                                   ಇಂತಿ,
                                   ಕವಿತಾ ಗೋಪಿಕುಂಟೆ

Tuesday, August 18, 2015

ಜ್ಞಾನವಿಲ್ಲದ ಮನ

ಜ್ಞಾನದ ಸ್ನಾನವಿಲ್ಲದ ಮನಸಿಟ್ಟು
ನೂರುಬಾರಿ ಜಳಕ ಮಾಡಿ
ಸುಗಂಧದ್ರವ್ಯಗಳ ಲೇಪಿಸಿದರೇನು
ಮನದ ದುರ್ಗಂಧ ಹೋದೀತೇ

ಚಾಡಿ ಹೇಳುವ ನಾಲಿಗೆಗೆ
ಉಪ್ಪಾಕಿ ತಿಕ್ಕಿದರೇನು
ಅದರ ಚಟವ ಬಿಟ್ಟೀತೇ

ಕೆಸರಲಾಡಿದ ಎಮ್ಮೆಗೆ
ಮೈತೊಳೆದರೆ ಸಾಕು
ದುರ್ಗಂಧ ಹೋಗುವುದು
ಹಲ್ಲು ತಿಕ್ಕದಿದ್ದರೂ ಬಾಯಿ
ವಾಸನೆಬಾರದು

ಛೀ ಛೀ ಎಮ್ಮೆಗಿಂತ ಕೇಡು
ದುರುಳರ ಬಾಳು

                                           ಇಂತಿ,
                                           ಕವಿತಾ ಗೋಪಿಕುಂಟೆ

Monday, August 17, 2015

ಪ್ರತಿಭೆ

ಕೆಸರಲ್ಲೆ ಹುಟ್ಟುವುದು ಕಮಲ
ಬಡತನದಲ್ಲೇ ಹುಟ್ಟುವುದು ಪ್ರತಿಭೆ
ಕಮಲಕ್ಕೆ ಕೆಸರಿನ ವಾಸನೆ ಇಲ್ಲ
ಪ್ರತಿಭೆಗೂ ಬಡತನದ ಹಂಗಿಲ್ಲ
ಕಮಲವ ದೇವರಿಗರ್ಪಿಸುವಾಗ
ಪ್ರತಿಭೆಗೂ  ಮನ್ನಣೆ ಬೇಕಲ್ಲವೇ

                                                 ಇಂತಿ,
                                                 ಕವಿತಾ ಗೋಪಿಕುಂಟೆ

Thursday, August 13, 2015

ಆಯ್ಕೆ


ಹುಟ್ಟುವ ಆಯ್ಕೆ ನನಗಿರಲಿಲ್ಲ
ಸಾಯುವ ಆಯ್ಕೆ ಇದ್ದರೂ
ಸಾಯುವ ಮನಸಿಲ್ಲ
ಆಡಿ ಬೆಳೆವಾಗ ಕೊಡಲಿಲ್ಲ
ಆಯ್ಕೆಗೆ ನೀ ಅವಕಾಶ
ಎಲ್ಲಿ ಹೋದರೂ ನಿನ್ನದೇ
ಅಭಿಪ್ರಾಯ ನಿನ್ನದೇ ಆಯ್ಕೆ
ಬದುಕೆಂಬ ಮೂರುಮಾರಿನ
ಮೈಲಿಗಲ್ಲಲ್ಲಿ ಸವೆಸಿರುವೆ ಒಂದರ್ದವ
ಇನ್ನಾದರೂ ಬಿಡು ನನ್ನ
ಉಳಿದ ಪಥ ನಾ ನಡೆಯುವೆ
ನನ್ನಿಷ್ಟದ ಬದುಕ ನಾ ಬದುಕುವೆ
ನಡೆವ ಬರದಲ್ಲಿ ನಾ
ಬೀಳ್ವೆನೆಂಬ ಭಯ ಬೇಡ
ನನಗೂ ಇರಲಿ
ಏಳು ಬೀಳಿನ ಸವಿಗವನ
ಕೊನೆವರೆಗೂ ಇರಲಿ
ನಿನ್ನ ಆಶಿರ್ವಚನ

                                                      ಇಂತಿ,
                                                      ಕವಿತಾ  ಗೋಪಿಕುಂಟೆ

Tuesday, May 26, 2015

ಬಾಯಿಸಿಹಿ

ಕಳಿತ ಹಣ್ಣು ಮರದಲ್ಲಿ ಇರೋದು
ಬಹುರಾಷ್ಟ್ರೀಯ ಕಂಪನಿಯಲ್ಲಿ
ಕೆಲಸ ಮಾಡುತ್ತಾ ಇರೋದು
ಎರೆಡೂ ಒಂದೇ

ಕೆಳಗೆ ಯಾವಾಗ ಬೀಳ್ತಿನಿ
ಅಂತ ಹಣ್ಣಿಗೆ ಗೊತ್ತಿರಲ್ಲ
ಕಂಪನಿ ಯಾವಾಗ ತೆಗೆದು ಹಾಕುತ್ತೆ ಅಂತ
ಅಲ್ಲಿ ಕೆಲಸ ಮಾಡೋರಿಗೆ ಗೊತ್ತಿರಲ್ಲ

ಆದರೆ
ಹಣ್ಣು ಬಿದ್ದಾಗ, ಕೆಲಸ ಹೋದಾಗ
ಸಿಹಿಯಾಗೋದು ಮಾತ್ರ
ಬೇರೆಯವರ ಬಾಯಿ

                                                              ಇಂತಿ,
                                                              ಕವಿತಾ ಗೋಪಿಕುಂಟೆ

Thursday, May 21, 2015

ಮತ್ತೆ ಮತ್ತೆ ಒಲವು



ಆ ಮೋಡಕೂ ರವಿಕಂಡು ಒಲವಾಗಿ
ಪ್ರೀತಿ ತುಸು ಹೆಚ್ಚಾಗಿ ಕಾರ್ಮೋಡವಾಗಿದೆ
ಇನಿಯನ ನೋಡುವ ಪುಳಕದಿ
ತಂಗಾಳಿ ಸೋಕಿ ಮನ ಹಗುರಾಗಿದೆ
ನಿಂತಲ್ಲಿ ನಿಲ್ಲದೆ ಕುಂತಲ್ಲಿ ಕೂರದೆ
ಅಲ್ಲೊಮ್ಮೆ ಇಲ್ಲೊಮ್ಮೆ ಹಾರಾಡಿದೆ
ಇನಿಯ ಕಂಡಾಕ್ಷಣ ಮೈ ರಂಗು
ಹೊನ್ನಾಗಿ ಸಂಭ್ರಮಿಸುತಿದೆ
ಸಂಭ್ರಮವ ಕಂಡು ಇಳೆಯಿಂದ
ನವಿಲು ನೃತ್ಯಗೈದು ತನ್ನ
ಕಾಲ್ಗೆಜ್ಜೆ ನಾದದಿ ಶುಭಾಷಯ ಕೋರಿದೆ
ರವಿಯು ಪ್ರೀತಿ ತಿರಸ್ಕರಿಸಿ ಕಾಣದಾದಾಗ
ಚಡಪಡಿಸಿ ಹುಸಿಕೋಪವ ಗುಡುಗು
ಮಿಂಚಾಗಿ ತೋರ್ಪಡಿಸಿ
ದುಃಖ ತಾಳಲಾರದೆ ಚಟಪಟ ಮಳೆಯಾಗಿ
ಬಿಕ್ಕಿ ಬಿಕ್ಕಿ ಅಳುತ್ತಾ ಇಳೆಗೆ ತಂಪೆರೆದಿದೆ
ಆದರೆ
ಈ ಕಣ್ಣೀರು ನಲ್ಲೆಯ ಒಲವ ಕರಗಿಸಿದೆ
ಇದ ಕಂಡ ಮಳೆಬಿಲ್ಲು ಸಪ್ತ ವರ್ಣಗಳರಡಿ
ಸಾಂತ್ವನ ಹೇಳಿ ಹೊಸಹುರುಪ ತಂದಿದೆ
ಹೊಸ ಹುರುಪಲಿ ಹೊಸ ಹರುಷದಿ
ಆ ಮೋಡಕೆ ಮತ್ತೆ ಮತ್ತೆ ಒಲವಾಗಿದೆ

                                                       ಇಂತಿ,
                                                       ಕವಿತಾ ಗೋಪಿಕುಂಟೆ

Wednesday, May 13, 2015

ಪುಟ ಕಾಣದ ಹಳೆ ಸರಕು


ಸದಾ ಜನ ಜಾತ್ರೆಯಂತಿದ್ದ ಮನ
ಸುಖಾ ಸುಮ್ಮನೆ ಒಮ್ಮೆಲೆ
ನೀರಸ ಮೌನದಿ
ಸಾಲು ಪರ್ವತಗಳೆಡೆಗೆ ಜಾರಿ ನಿಂತಿದೆ

ಒಬ್ಬಂಟಿಯಾದಾಗ ಧುಮ್ಮಿಕ್ಕುವ
ಕಹಿ ನೆನಪು, ಅನಾಥ ಭಾವಗಳು
ಪರ್ವತಗಳ ಮಧ್ಯೆ ತೊಯ್ದಾಡಿ ಪ್ರತಿಧ್ವನಿಸಿ
ಮತ್ತಷ್ಟು ಮೊಗದೊಷ್ಟು ಕುಗ್ಗಿಸುತಿವೆ  ಮನವ

***********************************
ಅರಿವಿನ ಕಡಲ ಸೇರಲು
ಜ್ಞಾನದ ನದಿಯು
ಅಜ್ಞಾನದ ಕಟ್ಟೆಯೊಡೆದು ಹರಿಯಬೇಕು

***********************************
ನಮ್ಮ ಸಮಯದ ಹೂಡಿಕೆ ಗೊತ್ತಾಗುವುದು
ನಾವು ಓದಿದ ಪುಸ್ತಕಗಳ ಸಂಖ್ಯೆ ಮತ್ತು ನಾವು
ಮಾಡಿಕೊಂಡ ಹೊಸ ಸ್ನೇಹಿತರ ಸಂಖ್ಯೆಯಿಂದ.

ಹೂಡಿಕೆ ಸರಿಯೋ ತಪ್ಪೋ ಎಂದು ತಿಳಿಯುವುದು
ಆರಿಸಿಕೊಂಡ ಪುಸ್ತಕ ಮತ್ತು ಸ್ನೇಹಿತರಿಂದ.

***********************************
 ಮಾಗಿಯ ಕಾಲದ ಮುಂಜಾವಿನಲಿ
ಗರಿಕೆಗೆ ಅಂಟಿದ ಹನಿಯು ನಾನು
ನನ್ನ ಹಿಮಬಿಂದು ಮಾಡಬಂದ
ಶೀತ ಗಾಳಿ ನೀನು

***********************************
 ವಿದೇಶಿಗರೇ ದೇವರುಗಳಾಗಿ
ವಿದೇಶಿ ಬಂಡವಾಳವೇ ನಾಡಿಯಾಗಿ
ಲಾಭ ನಷ್ಟಗಳೇ ಮಿಡಿತಗಳಾಗಿರುವ
ಬಹು ರಾಷ್ಟ್ರೀಯ ಕಂಪನಿಗಳಲ್ಲಿ
ಮನುಷ್ಯತ್ವ ಸತ್ತು ನಾರುತಿದೆ

***********************************
ವಾಶಿಂಗ್ ಮಷೀನ್ ನಲ್ಲಿ ಒಗೆದಿರೋ ಬಟ್ಟೆಗೂ
ಟಾರ್ಗೆಟ್ , ಡೆಡ್ ಲೈನ್ ಅಂತ ಯೋಚನೆಮಾಡಿ
ಸುಕ್ಕುಹಿಡಿದಿರೋ ಮನಸಿಗೆ ಅಷ್ಟೇನು ವ್ಯತ್ಯಾಸ ಇಲ್ಲ
ಬೆಳಿಗ್ಗೆ ಆಫೀಸ್ ಗೆ ಹೋಗಬೇಕಾದ್ರೆ
ಬಟ್ಟೆಗೆ ಮಾತ್ರ ಅಲ್ಲ ಮನಸಿಗೂ ಇಸ್ತ್ರಿ ಬೇಕು


***********************************
ಏರಿಳಿತದ ರೈತನ ಬಾಳು
ಒಂದು ಮಹಾನ್ ಸಾಗರ
ಆರ್ಭಟಿಸಿ ಅಪ್ಪಳಿಸುವ ಅಲೆಗಳೇ
ಅವನ ಕಷ್ಟ ಕಾರ್ಪಣ್ಯಗಳು
ನುಣು ಮರಳ ಮೇಲಿನ ತಿಳಿನೀರ
ಹಿತ ಸ್ಪರ್ಶವೇ ಸುಗ್ಗಿಯ ಹಿಗ್ಗು
ಆ ನೀರ ರುಚಿಯೇ ಅವನ
ಬೆವರು ಮತ್ತು ಕಣ್ಣೀರ ರುಚಿ  


***********************************
ಹೇಳಲಾಗದ ಅನಿಸಿಕೆಗಳು
ಗೊಂದಲದ ಗಾಳಿಗೆ ಸೇರಿ
ಪರ್ವತಗಳ ಸಾಲಲ್ಲಿ
ಹೊಡೆದಾಡುತಿವೆ
ಹಾನಿ ಆಗದಿದ್ದರೂ
ಆ ಶಬ್ದವೇ ಸಾಕಲ್ಲವೇ
ಚಿತ್ತ ಚಂಚಲಿಸಲು 


***********************************
ಮನಸಿನ ಸಾವಿರಾರು ಯಾತನೆಗಳಿಗೆ 
ಸೂಕ್ತವಾದ ಮಾತ್ರೆ "ಕಡೆಗಣಿಸುವಿಕೆ"  

***********************************
some people set their own path 
and walk in life garden

some people walk in path

 created by others

creating the path is difficult 

but it gives lot of joy

***********************************
ಚುಮು ಚುಮು ಚಳಿಯಲಿ
ಎಳೆ ಬಿಸಿಲಿಗೆ ಮೈಯೊಡ್ಡಿ ನಿಂತಾಗ
ಜಡಿ ಮಳೆಯಲಿ ಮಿಂದೆದ್ದ ಅನುಭವ 


                                                                         ಇಂತಿ,
                                                                         ಕವಿತಾ ಗೋಪಿಕುಂಟೆ   

Wednesday, April 29, 2015

ದೆವ್ವದ ಪೆಟ್ಟಿಗೆ

ಬಹುರಾಷ್ಟೀಯ ಕಂಪನಿಯೊಂದು
ಸುಂದರ ಪೆಟ್ಟಿಗೆ
ಹೊರಗಿಂದ ನೋಡುವವರಿಗೆ
ಗಲ್ಲಾ ಪೆಟ್ಟಿಗೆ
ಒಳಹೊಕ್ಕುವ ಮೊದಲು
ಮಾಯಾ ಪೆಟ್ಟಿಗೆ
ಹೊಕ್ಕಮೇಲೆ ತಿಳಿಯುವುದು
ಇದೊಂದು ದೆವ್ವದ ಪೆಟ್ಟಿಗೆ

ಒಳ ಹೊಕ್ಕಮೇಲೆ ಬಂಧಿಸುವುದು
ಮನವ ಮಾಯಾಜಾಲದಿ
ಬಿಟ್ಟೆನೆಂದರೂ ಬಿಡದೆ ಕಾಡುವುದು
ಆರ್ತನಾದದಿ
ಉಸಿರುಕಟ್ಟಿಸುವುದು ಕೊಳೆತ ಆತ್ಮಗಳ
ದುರ್ನಾತದಿ
ಬೆಚ್ಚಿಬೀಳಿಸುವುದು ಅತೃಪ್ತ ಆತ್ಮಗಳ
ಚೀರಾಟದಿ
ಸಮಾಧಾನಿಸುವುದು ತಿಂಗಳ ಕೊನೆಯ
ಬ್ಯಾಂಕ್ ಸಂದೇಶದಿ

ಇಂತಿ,
                     ಕವಿತಾ ಗೋಪಿಕುಂಟೆ