Sunday, April 21, 2013

21/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಸುಗ್ಗಿಯ ಹಿಗ್ಗು "


ಬೇಸಾಯವನೇ  ಕುಲಕಸುಬಾಗಿಸಿದ
ಜನಗಳಿಗೆಲ್ಲ ಅನ್ನದಾತರೆಂದು ಕರೆಯುವರು
ರೈತನೇ ದೇಶದ ಬೆನ್ನೆಲುಬೆಂದು
ಮಹಾತ್ಮರೆಲ್ಲಾ ಹೇಳುವರು

ಮಳೆ ಬಿಸಿಲೆನ್ನದೆ
ಚಳಿ ಜ್ವರ ಲೆಕ್ಕಿಸದೆ
ಸೊಂಟಕೆ ಬಟ್ಟೆಯ ಬಿಗಿದು
ನೇಗಿಲ ಹಿಡಿದು ಮುನ್ನುಗ್ಗುವರು

ಕಲ್ಲು ಮುಳ್ಳುಗಳ ಪರಿವೇ ಇಲ್ಲದೆ
ಬರಿಗಾಲ ಪಕೀರನಂತೆ ಹೊಲದಲ್ಲೆಲ್ಲಾ  ತಿರುಗುವರು
ಎಷ್ಟೇ ದುಡಿದರು ಎಷ್ಟೇ ದಣಿದರು
ಸದಾ ಹಸನ್ಮುಖಿಗಳಾಗಿರುವರು

ಕಾರ್ಮೋಡವ ಕಂಡು ಬೀಜವ ಬಿತ್ತಿ
ಕುಡಿ ಹೊಡೆದ ಪೈರನ್ನ ಒಡಲಕುಡಿಯಂತೆ ಸಲಹಿ
ಹೊಂಗನಸ ಕಾಣುತ್ತ ಆರು ಮಾಸಗಳ ದೂಡುವರು
ತೆನೆ ಹೊಡೆದು ಬಲಿತಾಗ ಸುಗ್ಗಿಗಾಗಿ ಕಾಯುವರು

ಬೇಸಾಯ ಮನೆ ಮಕ್ಕಳೆಲ್ಲಾ
ಸಾಯಾ ಎಂಬ ಗಾದೆ ಮಾತಂತೆ
ಮಕ್ಕಳಿಂದಿಡಿದು  ಮುದುಕರವರೆಗೆ
ಎಲ್ಲರು ಸೇರಿ ದುಡಿಯುವರು

ಕಣ ಬಳಿದು ಹಸನಾಗಿಸಿ
ತೆನೆ ಕೊಯ್ದು ಹಾಸಿ
ದನಕರುಗಳಿಂದ ತೆನೆಯನ್ನು ತುಳಿಸಿ
ತೂರುತ್ತ ಕೇರುತ್ತ ಹಾಡಿ ಕೊಂಡಾಡುವರು

ಧಾನ್ಯದ ರಾಶಿ ಹಾಕಿ ಕಣವನ್ನೆಲ್ಲ ಸಿಂಗರಿಸಿ
ಭೂದೇವಿಗೆ ನಮಸ್ಕರಿಸಿ ಅಷ್ಟದಿಕ್ಕುಗಳಿಗೆ ನೀವಳಿಸಿ
ಸುಗ್ಗಿಯ ಸವಿಯನ್ನು ಹಿಗ್ಗಿ ಹಿಗ್ಗಿ ಸವಿಯುತ
ಧಾನ್ಯಲಕ್ಷ್ಮಿಯನು ಮನೆ ತುಂಬಿಸಿಕೊಳ್ಳುವರು 


 ಇಂತಿ,
         ಕವಿತಾಗೌಡ

Wednesday, April 10, 2013

11/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಮತ್ತೆ ಬಂದಿದೆ ಯುಗಾದಿಯು "


ಮತ್ತೆ ಬಂದಿದೆ ಯುಗಾದಿಯು

ಬರಡಾಗಿ ನಿಂತ ಮರಕೆ
ಮತ್ತೆ ಕಳೆಯ ತುಂಬಲು
ಚಿಗುರೊಡೆದು ಹಸಿರಾಗಿ
ಮತ್ತೆ ಬಂದಿದೆ ಯುಗಾದಿಯು

ಹೊಂಗೆ ಜೇನ ಸಂಭ್ರಮದಿ
ಕೋಗಿಲೆಯ ಹೊಸ ಧ್ವನಿಯಲಿ
ಹೊಸ ವರುಷದ ಹೊಸ ನಾದದಿ
ಮತ್ತೆ ಬಂದಿದೆ ಯುಗಾದಿಯು

ಬಿತ್ತು ಹೊತ್ತು ದಣಿದ ರೈತನಿಗೆ
ಬಿಡುವು ಕೊಡಲೆಂಬಂತೆ
ಹೊಸ ವರುಷದ ಹರುಷವ
ಕೊಂಡು ತಂದಿದೆ ಈ ಯುಗಾದಿಯು

ಬಿರಿದು ಉರಿಯುತಿರುವ
ಮೈ ತಣಿಸಲು
ಎಣ್ಣೆ ಸ್ನಾನದ ನೆಪದಲಿ
ಮತ್ತೆ ಬಂದಿದೆ ಯುಗಾದಿಯು

ತಳಿರು ತೋರಣ ಕಟ್ಟಿ
ಸಿಹಿ ಊರಣದ ಹೊಬ್ಬಟ್ಟನ್ನು ತಟ್ಟಿ
ಬೇವು ಬೆಲ್ಲದ ಜೊತೆಗೆ
ಜೀವನದಿ ಸಿಹಿ ಕಹಿಯ ಸಮನಾಗಿ ಸಂಭ್ರಮಿಸಲು
ಮತ್ತೆ ಬಂದಿದೆ ಯುಗಾದಿಯು

ಇಂತಿ,
      ಕವಿತಾಗೌಡ


Sunday, April 7, 2013

7/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ "ನಾ ಬರೀ ಭ್ರೂಣವಲ್ಲ"

ನಾ ಬರೀ ಭ್ರೂಣವಲ್ಲ


ಕರುಳ ಕುಡಿ ಚಿಗುರುತಿಹುದು
ಎಂದು ನೀ ತಿಳಿದಾಗ
ಎಷ್ಟು ಸಂತೋಷ ಪಟ್ಟೆ
ಅದೇ ನಾ ಹೆಣ್ಣೆಂದು ತಿಳಿದಾಗ
ಏಕೆ ಈ ಬೇಕು ಬೇಡಗಳ ತೊಳಲಾಟ

ನಾ ಬರೀ ಭ್ರೂಣವಲ್ಲ
ನಿನ್ನದೇ ಒಂದು ಭಾಗ
ನಿನ್ನುಸಿರಿನ ಉಸಿರು
ನಿನ್ನದೇ ಒಂದು ಕನಸು
ಅದು ನಿನಗೆ ತಿಳಿಯದೆ

ನಾ ನಿನಗೆ ಬೇಡವೋ
ಈ ಪ್ರಪಂಚಕ್ಕೆ ಬೇಡವೋ
ಅದ ನಾನರಿಯೆ
ಆದರೂ ತಿಳಿಯುತಿಹುದು ನನಗೆ
ಅನಿಷ್ಟವೆಂದು ಕಟ್ಟಿರುವ ಹಣೆಪಟ್ಟ

ನಾನೊಂದು ಜೀವ
ನನಗೊಂದು ಮನಸಿದೆ
ಅದಕು ಸಾವಿರ ಕನಸಿದೆ
ಕಣ್ಣಬಿಡುವ ಮುನ್ನವೆ
ಕಳಚಿ ಹಾಕುವ ಮನವೇಕೆ

ಹೆಣ್ಣೆಂಬ ಕಾರಣಕೆ
ಹುಣ್ಣಂತೆ ಕಂಡು
ಹಣ್ಣಂತೆ ಕೊಚ್ಚಿ
ಪ್ರಾಣವ ಹಿಂಡುವ
ಕಲ್ಲು ಹೃದಯವೇಕೆ

ನನ್ನ ಮಿಡಿತವನರಿಯದೆ
ಮಣ್ಣಾಗಿಸುವ ಮುನ್ನ
ನೀ ಕೂಡ ಹೆಣ್ಣಿಂದಲೇ 
ಕಣ್ಣ ಬಿಟ್ಟಿರುವೆಯೆಂಬ
ಸತ್ಯವ ಮರೆತೆಯೇಕೆ

         ಇಂತಿ,
                 ಕವಿತಾಗೌಡ