Friday, October 30, 2020

ಶಿರಾ ಉಪಚುನಾವಣೆ

 ಸತ್ಯಣ್ಣನ ಅಕಾಲಿಕ ಮರಣ

ತಂದಿದೆ ಶಿರಾ ಕ್ಷೇತ್ರದ ಉಪಚುನಾವಣಾ

ಪ್ರಚಾರ ಬಲು ಜೋರು 

ಏರಿಸುತಿದೆ ಕಾವು


ನಮ್ಮ ಮತ ನಮ್ಮ ಹಕ್ಕು 

ಚಲಾಯಿಸದಿದ್ದರದುವೆ ದೊಡ್ಡ ತಪ್ಪು 

ನಮ್ಮದೊಂದು ಮತ

ಆಗಲಿದೆ ಅಭಿವೃದ್ಧಿಯ ಮೂಲ


ಸೀರೆ ಹೆಂಡ ಬದಿಗೆ ಸರಿಸಿ

ಒತ್ತೋಣ ಓಟು

ಮುಟ್ಟದೆಯೇ 

ಗಾಂಧಿ ನೋಟು


ಸ್ವಇಚ್ಚೆಯಿಂದ ಮತದಾನ ಮಾಡಿ

ಎಲ್ಲರಿಂದ ಮತದಾನ ಮಾಡಿಸಿ

ಮಳೆಗೆ ಕೆರೆಕುಂಟೆ ತುಂಬಿದಂತೆ

ಓಟಿನಿಂದ ಮತಡಬ್ಬಿ ತುಂಬಿಸಿ 

ಸಮರ್ಥರನ್ನು ಆರಿಸೋಣ

                                ಇಂತಿ ,

                                ಕವಿತಾ ಗೋಪಿಕುಂಟೆ

Sunday, November 11, 2018

ಅನಿಶ್ಚಿತತೆ

ಬದುಕೊಂದು ಅನಿಶ್ಚಿತತೆಯ ಗೂಡು
ಮಗ್ಗಲಾಗುವುದರೊಳಗಾಗಿ ಹಾರುವುದು
ಬದಲಾವಣೆಯ ಗುಬ್ಬಿ

-ಕವಿತಾ ಗೋಪಿಕುಂಟೆ

Sunday, November 19, 2017

ಬೆಳಕು

ನನ್ನೊಳಗಿನ ನೀನು
ಕತ್ತಲೊಳಗಿನ ಬೆಳಕು

                  --ಕವಿತಾ ಗೋಪಿಕುಂಟೆ

Monday, September 25, 2017

ಸದ್ದು

ನೀರಿಗೆ ಜಿಗಿವಾಗ ಬರುವ ಶಬ್ದ
ನೀರಿಂದ ಮೇಲೇಳುವಾಗ ಬರುವುದಿಲ್ಲ
ತಪ್ಪು ಮಾಡುವಾಗ ಆಡಿಕೊಂಡು ಸದ್ದು ಮಾಡುವ ಜನ
ಒಂದೊಳ್ಳೆ ಕೆಲಸ ಮಾಡುವಾಗ ಮಾತಾಡೋದಿಲ್ಲ
ಇದರಿಂದಲೇ ತಿಳಿಯುತ್ತದೆ
ಸದ್ದಿನಿಂದಿರುವ ಉದ್ದೇಶವೇನೆಂದು

                                      --ಕವಿತಾ ಗೋಪಿಕುಂಟೆ

ಓ ಜೀವವೇ

ಓ ಜೀವವೇ
ಖುಷಿಯೆಂದರೆ ನನಗೆ,

ನನ್ನದಲ್ಲದ ಊರಿನಲಿ
ಜನತುಂಬಿದ ಬೀದಿಯಲಿ
ನಮ್ಮದೇ ಭಾಷೆಯಲಿ
ನಿನ್ನನ್ನು ಕೂಗುವುದು

ತುಂತುರು ಮಳೆಯಲಿ
ಬಿಳಿಮರಳ ಬೀಚಿನಲಿ
ನಿನ್ನೆಜ್ಜೆ ಮೇಲೆ
ನನ್ನೆಜ್ಜೆ ಇಡುವುದು

ಬಿದಿರ ಕಾಡಿನಲಿ
ಬೀಸೋ ಗಾಳಿಯಲಿ
ನಿನ್ನನ್ನೆ ಬೆನ್ನಟ್ಟಿ
ಓಡೋಡಿ ಬರುವುದು

ಅವರ ದೇವಾಲಯದಲ್ಲಿ
ಅಲ್ಲಿನ ಸಂಪ್ರದಾಯದಲಿ
ಅವರದೇ ಭಾಷೆಯಲಿ
ನಿನಗಾಗಿ ಬೇಡುವುದು

ಇಷ್ಟೆಲ್ಲಾ ಗಳಿಗೆಗಳ
ಬಚ್ಚಿಟ್ಟು ಕಾಯುತಿರುವೆ
ಬಂದುಬಿಡು ಬಹುಬೇಗ
ನಾನಿರುವ ಊರಿಗೆ

                     --ಕವಿತಾ ಗೋಪಿಕುಂಟೆ

ದಾರ

ಸೂಜಿ ನಾವಾಗಿ
ದಾರ ಬಾಳದಾರಿಯಾದಾಗ
ದಾರಕಾಕುವ ಗಂಟೇ ತವರು

ದಾರದ ಬುಡದಿ ಗಂಟಿಲದಿರೆ
ಹೊಲಿಗೆ ಸಾಧ್ಯವಿಲ್ಲ
ತವರ ಮರೆತ
ಯಾರ ಬಾಳಿಗೂ ಅರ್ಥವಿಲ್ಲ

            --ಕವಿತಾ ಗೋಪಿಕುಂಟೆ

Tuesday, June 20, 2017

ಸಾವ ಕೆಸರು

ನಿನ್ನ ನೆರಳಿಡಿದು
ಹಿಂಬಾಲಿಸಿರುವೆ
ಮಾತಾಡದ
ಕಾಲ್ಗೆಜ್ಜೆ ಜೊತೆ
ಮಾತಾಡುವ ಪರಿಗೆ
ಹೊಳಪಿಲ್ಲದ
ಮೂಗುತಿ ಬೆಳಕಲ್ಲಿ
ದಾರಿ ಹುಡುಕುವ ದಾಟಿಗೆ
ಮನಸಾರೆ ಮನಸೋತು
ಸಾವ ಕೆಸರಲೂ
ಕನಸ ಕಮಲವ ಬಿತ್ತಿ
ಪ್ರೀತಿ ಮೊಗೆಯಲು
ಹಿಂಬಾಲಿಸಿರುವೆ

                       --ಕವಿತಾ ಗೋಪಿಕುಂಟೆ 

ಭಾವಬಣ್ಣ

ಕಳ್ಳ ನೋಟದ
ಬಾಣನಾಟಿ
ಕೆನ್ನೆಗುಳಿಯಲಿ
ಮೊಡವೆ ಮೂಡಿ
ನಿನ್ನ ಭಾವಬಣ್ಣ
ನನ್ನ ಮೊಗದ
ರಂಗೇರಿಸಿದೆ

                  --ಕವಿತಾ ಗೋಪಿಕುಂಟೆ 

ತುಂತುರು

ಇನಿಯ ಜೊತೆಗಿರಲು
ತುಂತುರು ಮಳೆಬರಲು
ಇನ್ನೇನು ಬೇಕು
ಮನ ತಣಿಯಲು

                     --ಕವಿತಾ ಗೋಪಿಕುಂಟೆ